ಬೆಂಗಳೂರು: ಬಡವರಿಗೆ ಕೊರೊನಾ ಚಿಕಿತ್ಸೆ ನೀಡುವುದಾಗಿ ಹೇಳಿದ ನಕಲಿ ವೈದ್ಯೆ ಫೇಸ್ಬುಕ್ ಸ್ನೇಹಿತನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ಸೂರ್ಯಕಾಂತ್ ಬಿಹಿರಾ ಹಣ ಕಳೆದುಕೊಂಡ ವ್ಯಕ್ತಿ. ಕಳೆದ 15 ದಿನಗಳ ಹಿಂದೆ ಫೇಸ್ಬುಕ್ ನಲ್ಲಿ ಪ್ರಿಸ್ಮಿಲಾ ಎಂಬ ಮಹಿಳೆ ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಅನ್ನು ಸೂರ್ಯಕಾಂತ್ ಸ್ವೀಕರಿಸಿದ್ದಾರೆ. ಯುಕೆ ಯಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದು, ಭಾರತಕ್ಕೆ ಬಂದು ಬಡವರಿಗೆ ಕೊರೊನಾ ಚಿಕಿತ್ಸೆ ನೀಡುತ್ತೇನೆ ಎಂದು ಪ್ರಿಸ್ಮಿಲಾ ಹೇಳಿಕೊಂಡಿದ್ದಳು.
ಹೀಗೆ ಪರಿಚಯಗೊಂಡು ಕಾಲಕ್ರಮೇಣ ಇಬ್ಬರು ಪ್ರತಿದಿನ ಚಾಟ್ ಮಾಡಿಕೊಂಡಿದ್ದಾರೆ. ನ.11 ರಂದು ಕರೆ ಮಾಡಿದ ನಕಲಿ ವೈದ್ಯೆ ಪ್ರಿಸ್ಮಿಲಾ, ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದೇನೆ. 3 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಯನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಉಡುಗೊರೆ ಬಿಡಿಸಿಕೊಳ್ಳಲು ದಂಡ ಪಾವತಿಸಬೇಕೆಂದು ಸೂರ್ಯಕಾಂತ್ಗೆ ಕರೆ ಮಾಡಿ ಹೇಳಿದ್ದಾಳೆ. ಇದನ್ನು ನಂಬಿದ ಸೂರ್ಯಕಾಂತ್ ತಮ್ಮ ಖಾತೆಯಲ್ಲಿದ್ದ 2.04 ಲಕ್ಷ ರೂಪಾಯಿ ಹಣವನ್ನು ಆನ್ಲೈನ್ ಮೂಲಕ ಪ್ರಿಸ್ಮಿಲಾ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ.
ಅಕೌಂಟ್ ನಲ್ಲಿ ಹಣ ಬೀಳುತ್ತಿದ್ದಂತೆ ನಕಲಿ ವೈದ್ಯೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು ವಂಚಿಸಿದ್ದಾಳೆ. ವಂಚನೆಗೊಳಗಾದ ವ್ಯಕ್ತಿಯು ನಗರದ ದಕ್ಷಿಣ ಸಿಎಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.