ಗೌರಿಬಿದನೂರು: ಮಹಿಳೆವೋರ್ವಳಿಗೆ ಚಾಕು ತೋರಿಸಿದ ಸರಗಳ್ಳರು ಸುಮಾರು 40 ಗ್ರಾಂ ಚಿನ್ನದ ಮಾಂಗಲ್ಯದ ಸರವನ್ನು ದರೋಡೆ ಮಾಡಿರುವ ಘಟನೆ ತಾಲೂಕಿನ ಇಡಗೂರು ಗ್ರಾಮದಲ್ಲಿ ನಡೆದಿದೆ.
ಮಹಿಳೆ ತಮ್ಮ ಮನೆಯಿಂದ ಜಮೀನಿನ ಕಡೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ಖದೀಮರು ದಾರಿ ಕೇಳುವ ನೆಪದಲ್ಲಿ ಮಹಿಳೆ ಜೊತೆ ಮಾತನಾಡಿದ್ದರು. ಸುತ್ತಮುತ್ತ ಯಾರು ಇಲ್ಲದೆ ಇರುವುದನ್ನು ಗಮನಿಸಿ, ಆಕೆಗೆ ಚಾಕು ತೋರಿಸಿ ಮಾಂಗಲ್ಯ ಸರವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.