ಬೆಂಗಳೂರು : ನಿನ್ನೆ ದೆಹಲಿಯಲ್ಲಿ ಬಂಧನಕ್ಕೊಳಗಾಗಿದ್ದ ಡ್ರಗ್ ಪೆಡ್ಲರ್ ವೀರೇನ್ ಖನ್ನಾನನ್ನು ಚಾಮಾರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ವಿಚಾರಣೆಗಾಗಿ ಕರೆತರಲಾಗಿದೆ.
4 ದಿನಗಳ ಕಾಲ ವೀರೇನ್ ಖನ್ನಾನನ್ನು ಕಸ್ಟಡಿಗೆ ಪಡೆದಿರುವ ಸಿಸಿಬಿ ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಕಚೇರಿಗೆ ಕರೆತಂದಿದ್ದಾರೆ. ವೀರೇನ್ ಬೃಹತ್ ಪಾರ್ಟಿಗಳನ್ನು ಆರ್ಗನೈಸ್ ಮಾಡುತ್ತಿದ್ದ. ಅಲ್ಲದೆ ಪಾರ್ಟಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿಯಲ್ಲಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಸಿಬಿ ತನಿಖೆ ವೇಳೆ, ಖನ್ನಾ ಪಾರ್ಟಿ ಆಯೋಜಕನಾಗಿದ್ದು ಪಾರ್ಟಿಗೆ ಬರುತ್ತಿದ್ದ ಸಿನಿ ತಾರೆಯರು, ಉದ್ಯಮಿಗಳು, ರಾಜಕೀಯ ನಾಯಕರ ಮಕ್ಕಳ ಸ್ನೇಹ ಬೆಳೆಸಿದ್ದ. ಪಾರ್ಟಿಯಲ್ಲಿ ಡ್ರಗ್ ಸರಬರಾಜು ಮಾಡಿ ಅಧಿಕ ಹಣ ಪಡೆದು ಐಷಾರಾಮಿ ಜೀವನ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಈಗಾಗಲೇ ಸಿಸಿಬಿ ಬಂಧಿಸಿರುವ ರವಿಶಂಕರ್, ರಾಹುಲ್, ರಾಗಿಣಿ ದ್ವಿವೇದಿ ಜೊತೆಗೆ ದೆಹಲಿ ಮೂಲದ ಖನ್ನಾ ಹೊಸ ಸೇರ್ಪಡೆಯಾಗಿದ್ದಾನೆ.