ಬೆಂಗಳೂರು: 48 ಕೋಟಿ ರೂ. ನಿಶ್ಚಿತ ಠೇವಣಿ (ಎಫ್‌ಡಿ) ಹಣ ದುರುಪಯೋಗ ಆರೋಪದಡಿ ಉತ್ತರಹಳ್ಳಿ ಸಿಂಡಿಕೇಟ್ ಬ್ಯಾಂಕ್ನ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸೇರಿ ಮೂವರ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಅವರು ದೂರು ಕೊಟ್ಟಿದ್ದಾರೆ.
ಏನಿದು ಆರೋಪ?: ಮಂಡಳಿಯ ಆವರ್ತನ ನಿಧಿಯಿಂದ ನಿಶ್ಚಿತ ಠೇವಣಿ (ಎಫ್‌ಡಿ) ಇಡುವ ಸಲುವಾಗಿ ಬ್ಯಾಂಕ್‌ಗಳಿಂದ ಕೊಟೇಷನ್ ಕೇಳಿದ್ದರು. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ಉತ್ತರಹಳ್ಳಿಯ ಶಾಖೆಯು ಎಫ್‌ಡಿ ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿ ಕೊಡುವುದಾಗಿ ತಿಳಿಸಿತ್ತು.
ಇದರಂತೆ ರಾಜ್ಯ ಕೃಷಿ ಮಾರಾಟ ಮಂಡಳಿ ಆವರ್ತನ ನಿಧಿ ಇರುವ ರಾಜಾಜಿನಗರ ಶಾಖೆಯ ಆಂಧ್ರಾ ಬ್ಯಾಂಕಿನಿಂದ 100 ಕೋಟಿ ರೂ. ಆರ್‌ಟಿಜಿಎಸ್ ಮೂಲಕ ಸಿಂಡಿಕೇಟ್ ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿತ್ತು. ತಲಾ 50 ಕೋಟಿ ರೂ.ಯಂತೆ 2 ಎಫ್‌ಡಿ ಇಡುವಂತೆ ತಿಳಿಸಲಾಗಿತ್ತು. ಬಳಿಕ ಜ.20ರಂದು ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿದಾಗ ಬ್ಯಾಂಕ್ ಸಿಬ್ಬಂದಿ ಕೊಟ್ಟಿದ್ದ ಎಫ್‌ಡಿ ಹೂಡಿಕೆ ಎರಡು ದಾಖಲಾತಿಗಳು ನಕಲಿ ಎಂಬುದು ಗೊತ್ತಾಗಿದೆ.
ಈ ವೇಳೆ ಬ್ಯಾಂಕ್ ವ್ಯವಸ್ಥಾಪಕರು 52 ಕೋಟಿ ರೂ.ಎಫ್‌ಡಿ ಹೂಡಿಕೆಗೆ ಮಾತ್ರ ದಾಖಲಾತಿ ಕೊಟ್ಟಿದ್ದಾರೆ. ಬಾಕಿ 48 ಕೋಟಿ ರೂ.ಗೆ ಲೆಕ್ಕ ಕೊಡುತ್ತಿಲ್ಲ. ಬ್ಯಾಂಕ್ ಸಿಬ್ಬಂದಿ ಈ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.