ಬೆಂಗಳೂರು : ಅಕ್ರಮವಾಗಿ ಹಣ ಸಂಪಾದನೆ ಮಾಡಲು ಹಾಗೂ ಐಷಾರಾಮಿ ಜೀವನ ನಡೆಸಲು ಮೆಕ್ಯಾನಿಕ್ ಕೆಲಸ ಬಿಟ್ಟು ರಾತ್ರಿ ವೇಳೆ ಬೈಕ್‌ಗಳನ್ನು ಕದಿಯುತ್ತಿದ್ದ ಕುಖ್ಯಾತ ಮೂವರು ಬೈಕ್ ಕಳ್ಳರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮುರಳಿ (25), ಪವನ್ ಧಾಮ (23) ಹಾಗೂ ಮಂಜುನಾಥ್ (23) ಎಂಬುವರು ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳೆಲ್ಲರೂ ಬೆಂಗಳೂರಿನ ಬನಶಂಕರಿ, ಕದಿರೇನಹಳ್ಳಿ ನಿವಾಸಿಗಳಾಗಿದ್ದಾರೆ.
ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ಗಳಾಗಿದ್ದ ಆರೋಪಿಗಳು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವ ಆಕಾಂಕ್ಷೆ ಹೊಂದಿದ್ದರು. ಇದಕ್ಕಾಗಿ ಮೆಕ್ಯಾನಿಕ್ ಕೆಲಸ ಬಿಟ್ಟು ರಾತ್ರಿ ವೇಳೆ ಬೈಕ್‌ಗಳ ಹ್ಯಾಂಡಲ್ ಮುರಿದು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.
ಇದೇ ಪ್ರಕರಣಗಳಲ್ಲಿ ಮೂವರು ಆರೋಪಿಗಳು ಜೈಲು ಸೇರಿದ್ದರು. ಜೈಲಿನಿಂದ ಹೊರ ಬಂದು ಮತ್ತೆ ಬೈಕ್ ಕಳ್ಳತನ ಮಾಡುತ್ತಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ಮತ್ತೆ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಕಳ್ಳತನ ಕೃತ್ಯ ಚುರುಕುಗೊಳಿಸಿದ್ದರು.
ಸದ್ಯ ಆರೋಪಿಗಳ ಬಂಧನದಿಂದ ದಕ್ಷಿಣ ವಿಭಾಗದಲ್ಲಿ 20 ಪ್ರಕರಣ ಬೆಳಕಿಗೆ ಬಂದಿವೆ. ಬಂಧಿತರಿಂದ 18 ದ್ವಿಚಕ್ರ ವಾಹನಗಳು ಸೇರಿ 22 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕುಖ್ಯಾತ ನಾಲ್ವರು ಬೈಕ್ ಕಳ್ಳರ ಬಂಧನ; 11 ಬೈಕ್ಗಳು ವಶ