ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ಳಂದೂರು ವ್ಯಾಪ್ತಿಯ ಹಾಲನಾಯಕನಹಳ್ಳಿಯ ಅಸ್ಟ್ರೋ ಮ್ಯಾನ್ಶನ್ ಅಪಾರ್ಟ್ಮೆಂಟ್ನಲ್ಲಿ ಟೆಕ್ಕಿ ಶ್ರೀನಾಥ್ (39) ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರ ಮೂಲದ ಈತ 2009ರಲ್ಲಿ ರೇಖಾ ಎಂಬವರನ್ನು ವರಿಸಿದ್ದ ಖಾಸಗಿ ಕಂಪೆನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ. ಅಲ್ಲದೇ ಬ್ಯಾಂಕ್ನಿಂದ ಲೋನ್ ಪಡೆದು ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಖರೀದಿಸಿದ್ದರಂತೆ.
ಪ್ರತಿ ತಿಂಗಳ ಸಾಲ ಕಟ್ಟುತ್ತಿದ್ದ ಶ್ರೀನಾಥ್, ಪತ್ನಿ ರೇಖಾ ಐಷಾರಾಮಿ ಜೀವನ ನಡೆಸೋದು, ದುಂದು ವೆಚ್ಚ ಮಾಡುವುದನ್ನು ಗಮನಿಸಿ ಕಡಿಮೆ ಖರ್ಚು ಮಾಡುವಂತೆ ಬುದ್ಧಿ ಹೇಳಿದ್ದರಂತೆ. ಆದರೆ ಇದರಿಂದ ಕೋಪಗೊಂಡಿದ್ದ ರೇಖಾ ಗಂಡನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದ ಶ್ರೀನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪತ್ನಿ ರೇಖಾ ಹಾಗೂ ಆಕೆಯ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 306ರಡಿ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಐಪಿಸಿ ಸೆಕ್ಷನ್ 34 ಅಪರಾಧಕ್ಕೆ ಸಂಚಿನಡಿ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.