ಬೆಂಗಳೂರು: ಕರ್ತವ್ಯ ನಿರತ ಟ್ರಾಫಿಕ್ ಎಎಸ್ಐಗೆ ಕಪಾಳಮೋಕ್ಷ ಮಾಡಿರುವುದಲ್ಲದೇ ಮಹಿಳಾ ಕಾನ್ ಸ್ಟೇಬಲ್ಗೆ ಅಸಭ್ಯವಾಗಿ ನಿಂದಿಸಿದ್ದ ಆರೋಪಿಯನ್ನು ಜೀವನ್ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣ ಮೂಲದ ಕೇಶವ್ ಗುಪ್ತಾ ಬಂಧಿತ ಆರೋಪಿ. ಕಳೆದ ಮಂಗಳವಾರ ಜೀವನ್‌ಭೀಮಾ ನಗರ ಸಂಚಾರ ಠಾಣೆ ಮುಂದೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾರೊಂದಕ್ಕೆ ಕೇಶವ್ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ನಡು ರಸ್ತೆಯಲ್ಲೇ ಪರಸ್ಪರ ಇರ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನು ಕಂಡ ಎಎಸ್ಐ ಶಿವಪ್ಪ ರಸ್ತೆಯಲ್ಲಿ ಜಗಳವಾಡಬೇಡಿ. ಇದರಿಂದ ಟ್ರಾಫಿಕ್ ಜಾಮ್ ಆಗುತ್ತಿದ್ದು ರಸ್ತೆ ಬದಿ ಕಾರು ನಿಲ್ಲಿಸಿ ಎಂದು ಇಬ್ಬರು ಚಾಲಕರಿಗೂ ತಾಕೀತು ಮಾಡಿದ್ದಾರೆ.
ಇಷ್ಟಕ್ಕೆ ಕೆರಳಿದ ಆರೋಪಿ ಕೇಶವ್, ಶಿವಪ್ಪರ ಸಮವಸ್ತ್ರ ಹಿಡಿದು ಕುತ್ತಿಗೆಗೆ ಕೈ ಹಾಕಿ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ಆರೋಪಿಯೊಂದಿಗೆ ಇದ್ದ ಆತನ ತಾಯಿ ಸಹ ಕಾಲಿನಿಂದ ಒದಿದ್ದಾರೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಆತನನ್ನು ಜೆ.ಬಿ.ನಗರ ಠಾಣೆಗೆ ಕರೆ ತಂದಿದ್ದಾರೆ. ಬಳಿಕ ಪೊಲೀಸರು ಇಬ್ಬರ ವಿರುದ್ಧ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಪ್ರಕರಣ ದಾಖಲಿಸಿದ್ದರು.
ಇನ್ನು ಇಬ್ಬರನ್ನು ಬಂಧಿಸಿ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆತಂದಾಗ ಆರೋಪಿ ಕೇಶವ್, ಅಲ್ಲೆ ಇದ್ದ ಮಹಿಳಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಕೆಟ್ಟ ಪದ ಪ್ರಯೋಗ ಮಾಡಿದ್ದ. ಈ ಸಂಬಂಧ ಮಹಿಳಾ ಪೊಲೀಸ್ ನೀಡಿದ ದೂರಿನಡಿ ಆರೋಪಿ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ. ಸದ್ಯ ಆರೋಪಿಯ ತಾಯಿ ಜಾಮೀನಿನ ಮೇಲೆ ಹೊರ ಬಂದರೆ, ಕೇಶವ್ ನ್ಯಾಯಾಂಗ ಬಂಧನದಲ್ಲಿದ್ದಾನೆ.