ಉಡುಪಿ: ಇಲ್ಲಿನ ಪುತ್ತೂರು ಗ್ರಾಮದ ವಿಷ್ಣುಮೂರ್ತಿ ನಗರ ನಿವಾಸಿ ಮಾಲತಿ ಕಾಮತ್ ಎಂಬವರನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಆನಂದ ಮತ್ತು ಅಶೋಕ್ ಎಂದು ಗುರುತಿಸಲಾಗಿದೆ. ಅಂದು ಕೊಲೆಗೈದು ವೃದ್ಧೆ ಮೈ ಮೇಲಿದ್ದ ಚಿನ್ನಾಭರಣ ಹಾಗೂ ಕಪಾಟಿನಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದರು.
ಮೂವರು ಹೆಣ್ಣು ಮಕ್ಕಳನ್ನು ಹೊಂದಿರುವ ಈ ವೃದ್ಧೆ, ಒಂಟಿಯಾಗಿ ವಾಸ ಮಾಡುತ್ತಿದ್ದರು. ಹೊಸ ಮನೆ ನಿರ್ಮಾಣದ ಸಲುವಾಗಿ ವಾಸವಿದ್ದ ಮನೆಯನ್ನು ಕೆಡವಲಾಗಿತ್ತು. ಕೆಡವಿದ ಮನೆಯಲ್ಲೇ ವೃದ್ಧೆ ವಾಸವಾಗಿದ್ದರು.
ಇದರ ಲಾಭ ಪಡೆದ ದುಷ್ಕರ್ಮಿಗಳು ವೃದ್ಧೆಯನ್ನು ಕೊಂದು ಹಣ ಹಾಗೂ ನಗದು ದೋಚಿದ್ದರು. ಕೊಲೆ ನಡೆದು ವಾರದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.