ಎರ್ನಾಕುಲಂ : ಕೇರಳದ ಎರ್ನಾಕುಲಂನಲ್ಲಿ ಅರೆಸ್ಟ್ ಆಗಿದ್ದ ಅಲ್-ಖೈದಾ ಸಂಘಟನೆಯ ಮೂವರು ಉಗ್ರರನ್ನು ಎರ್ನಾಕುಲಂ ನ್ಯಾಯಾಲಯ ಎನ್‌ಐಎ ಕಸ್ಟಡಿಗೆ ನೀಡಿದೆ. ನಿನ್ನೆ ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಪಶ್ಚಿಮ ಬಂಗಾಳದಲ್ಲಿ ಆರು ಮತ್ತು ಕೇರಳದಲ್ಲಿ ಮೂವರು ಉಗ್ರರನ್ನು ಬಂಧಿಸಿತ್ತು.
ಬಂಧಿತ 9 ಉಗ್ರರು ಪಾಕಿಸ್ತಾನ ಪ್ರಾಯೋಜಿತ ಅಲ್-ಖೈದಾ ಸಂಘಟನೆಗೆ ಸೇರಿದವರಾಗಿದ್ದರು. ಇವರು ಪಟಾಕಿಯಲ್ಲಿನ ಪೊಟ್ಯಾಶಿಯಂ ಬಳಸಿ ಸುಧಾರಿತ ಸ್ಫೋಟಕಗಳನ್ನು ತಯಾರಿಸಿದ್ದರು. ಅಲ್ಲದೇ ವಿವಿಧೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿತ್ತು.
ಕೇರಳದ ಎರ್ನಾಕುಲಂನಲ್ಲಿ ಅರೆಸ್ಟ್ ಆಗಿದ್ದ ಮುರ್ಷಿದ್ ಹಸನ್, ಯಾಕುಬ್ ಬಿಸ್ವಾಸ್, ಮುಷರಫ್ ಹೊಸೆನ್ ಹೆಸರಿನ ಉಗ್ರರನ್ನು ಇಂದು ಕೊಚ್ಚಿಯ ಎರ್ನಾಕುಲಂ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಉಗ್ರರನ್ನು ಎನ್‌ಐಎ ಕಸ್ಟಡಿಗೆ ನೀಡಿ ಆದೇಶಿಸಿದೆ. ಹೀಗಾಗಿ, ಉಗ್ರರನ್ನು ಕೊಚ್ಚಿಯಿಂದ ದೆಹಲಿಯಲ್ಲಿರುವ ಎನ್‌ಐಎ ಕಚೇರಿಗೆ ಕರೆದಂತು, ವಿಚಾರಣೆ ನಡೆಸಲಾಗುವುದು.