ರಾಯಪೋಲ್: ಕೊರೊನಾ ಸೋಂಕು ಹೆಚ್ಚುತ್ತಿದೆ ಮನೆಬಿಟ್ಟು ಹೊರಗಡೆ ಓಡಾಡಬೇಡಿ. ಸೋಂಕು ತಗುಲಿದರೆ ಪ್ರಾಣ ಹೋಗುತ್ತೆ ಎಂದು ಪತಿಗೆ ಪತ್ನಿ ಹೇಳಿದ್ದೇ ತಪ್ಪಾಯಿತು.
ಪತ್ನಿ ಹೇಳಿದ ಬುದ್ದಿಮಾತುಗಳಿಗೆ ಮನನೊಂದು ಪತಿ ರಾಮುಲು (60) ಸಾವನ್ನಪ್ಪಿದ್ದಾರೆ. ಸಿದ್ದಿಪೇಟ ಜಿಲ್ಲೆಯ ರಾಯಪೋಲ್ ಮಂಡಲದ ಲಿಂಗಾರೆಡ್ಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ರಾಮುಲು ಅವರು ತನ್ನ ಮಗ ರಾಜುವಿನೊಂದಿಗೆ ಘಜ್ವೆಲ್‌ನಲ್ಲಿ ರಸಗೊಬ್ಬರ ಅಂಗಡಿಯೊಂದನ್ನು ನಡೆಸುತ್ತಿದ್ದರು. ಲಾಕ್ಡೌನ್ನಿಂದಾಗಿ ಅಂಗಡಿ ಮುಚ್ಚಿ ಸ್ವಗ್ರಾಮ ಲಿಂಗಾರೆಡ್ಡಿಹಳ್ಳಿಗೆ ಹೋದರು. ಮನೆಗೆ ಹೋದ ನಂತರ ರಾಮುಲು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದರು.
ಮಂಗಳವಾರ ಘಜ್ವೆಲ್ಗೂ ಹೋಗಿ ಬಂದರು. ಹೀಗಾಗಿ ಪತ್ನಿ ಅಂಜಮ್ಮ ಈ ಕುರಿತು ಪ್ರಶ್ನಿಸಿದ್ದಾರೆ. ಈಗಾಗಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತಿರುಗಾಡುವುದೇಕೆ ಎಂದು ಕೇಳಿದ್ದಾರೆ. ಆಗ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಇದಕ್ಕೆ ಮನನೊಂದ ರಾಮುಲು, ಬುಧವಾರ ಮುಂಜಾನೆ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದರು.