ಲಖನೌ: ಕಾನ್ಪುರ ಎನ್ಕೌಂಟರ್ನ ಪ್ರಮುಖ ಆರೋಪಿ ರೌಡಿಶೀಟರ್ ವಿಕಾಸ್ ದುಬೆಯ ಬಿಕ್ರು ಗ್ರಾಮದಲ್ಲಿ 5 ಬಾಂಬ್‌ಗಳು ಪತ್ತೆಯಾಗಿವೆ.
ಜುಲೈ 3ರಂದು ಉತ್ತರ ಪ್ರದೇಶದ ಕಾನ್ಪುರಲ್ಲಿ ನಡೆದ ಎನ್ಕೌಂಟರ್ನಲ್ಲಿ ದುಬೆಯ ಸಹಚರರು ಎಂಟು ಪೊಲೀಸರು ಬಲಿಯಾಗಿದ್ದರು. ಅಂದಿನಿಂದ ಪ್ರತಿನಿತ್ಯ ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ನಿನ್ನೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಸೆರೆಸಿಕ್ಕಿದ್ದ ದುಬೆಯನ್ನು ಇಂದು ಉತ್ತರ ಪ್ರದೇಶದ ಕಾನ್ಪುರಕ್ಕೆ ಕರೆತರುವ ವೇಳೆ ಎನ್ಕೌಂಟರ್ನಲ್ಲಿ ದುಬೆಯನ್ನು ಹತ್ಯೆಗೈಯ್ಯಲಾಗಿದೆ. ಇತ್ತ ಆತನ ಸ್ವಗ್ರಾಮವಾದ ಉತ್ತರ ಪ್ರದೇಶದ ಬಿಕ್ರುವಿನಲ್ಲಿ 5 ಬಾಂಬ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇವು ಕಡಿಮೆ ತೀವ್ರತೆ ಹೊಂದಿರುವ ಕಚ್ಚಾ ಬಾಂಬ್ಗಳಾಗಿವೆ. ಕೆಲವು ಬಾಂಬ್‌ಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ವಿಕಾಸ್ ದುಬೆಯ ಕಾರು ಚಾಲಕ ದಯಾ ಶಂಕರ್ ಅಗ್ನಿಹೋತ್ರಿಯ ಮನೆಯಲ್ಲಿ ಸಿಕ್ಕಿದೆ. ಬಿಕ್ರು ಗ್ರಾಮದಲ್ಲಿ ಮೂರು ಪೊಲೀಸ್ ತಂಡಗಳು, ವಿಶೇಷವಾಗಿ ವಿಕಾಸ್ ದುಬೆ ಜೊತೆ ಸಂಪರ್ಕ ಹೊಂದಿದವರ ಮನೆಗಳಲ್ಲಿ ಶೋಧ ನಡೆಸುತ್ತಿದ್ದಾರೆ.
ಇದರ ಮಧ್ಯೆಯೇ ಆತನ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರ ಪಾಲ್ಗೊಳ್ಳುವಿಕೆ ಬಗ್ಗೆ ತಿಳಿದುಕೊಳ್ಳಲು ದುಬೆಯ ತಾಯಿ ವಾಸವಾಗಿರುವ ಕೃಷ್ಣನಗರದಲ್ಲಿನ ನಿವಾಸಕ್ಕೆ ಎಎಸ್ಪಿ ದೀಪಕ್ ಕುಮಾರ್ ತೆರಳಿದ್ದಾರೆ. ಇದಕ್ಕೆ ನಿರಾಕರಿಸಿರುವ ದುಬೆ ತಾಯಿ ಸರಳಾ ದುಬೆ, "ನನ್ನ ಮಗನಿಗೂ ನನಗೂ ಈಗ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದ್ದಾರೆ.