ಭಟ್ಕಳ (ಉತ್ತರ ಕನ್ನಡ): ತಾಲೂಕಿನ ಬೆಣಂದೂರು ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಹಳೆ ದ್ವೇಷಕ್ಕಾಗಿ ದುಷ್ಕರ್ಮಿಗಳ ಗುಂಪು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿ ಪದ್ಮಯ್ಯ ಜಟ್ಟಪ್ಪ ನಾಯ್ಕ (44) ಎಂದು ತಿಳಿದು ಬಂದಿದೆ. ಮಧ್ಯಾಹ್ನ 3.30ರ ಸುಮಾರಿಗೆ ಶಿರೂರಿನಲ್ಲಿರುವ ಡೈರಿಗೆ ಹಾಲು ನೀಡಿ ಬರುವ ಸಂದರ್ಭದಲ್ಲಿ ಸುಮಾರು 20 ರಿಂದ 22 ಜನರ ತಂಡ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಹಳೆ ದ್ವೇಷಕ್ಕಾಗಿ ಬಿತ್ತಾ ಹೆಣ?
ಈ ಹಿಂದೆ ಜಮೀನು ವಿಚಾರಕ್ಕಾಗಿ ಪದ್ಮಯ್ಯ ಜಟ್ಟಪ್ಪ ನಾಯ್ಕ ಹಾಗೂ ಇನ್ನೊಂದು ಗುಂಪಿನ ಮಧ್ಯೆ ಜಗಳ ನಡೆದಿತ್ತು ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಜುಲೈ 5 ರಂದು ಪ್ರಕರಣ ದಾಖಲಾಗಿತ್ತು. ಆದ್ರೆ ಇಂದು ಮಧ್ಯಾಹ್ನ ಪದ್ಮಯ್ಯ ಕೊಲೆಯಾಗಿದ್ದಾರೆ. ತಾಲೂಕಾಸ್ಪತ್ರೆಗೆ ಎಎಸ್ಪಿ ನಿಖಿಲ್.ಬಿ ಭೇಟಿ ನೀಡಿ, ಕೊಲೆಯಾದ ವ್ಯಕ್ತಿಯ ಸಹೋದರನ ಹೇಳಿಕೆ ಪಡೆದುಕೊಂಡಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.