ರೋಹ್ಟಂಗ್: ಹಿಮಾಚಲ ಪ್ರದೇಶದ ರೋಹ್ಟಂಗ್ನಲ್ಲಿ ನಿರ್ಮಿಸಲಾಗಿರುವ ಅಟಲ್ ಟನಲ್ನಲ್ಲಿ ಕೋವಿಡ್ ನಿಯಮ ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿದ 15 ಜನರನ್ನು ನಿನ್ನೆ ಹಿಮಾಚಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ 15 ಮಂದಿಯ ಪೈಕಿ 8 ಜನರಿಗೆ 40 ಸಾವಿರ ರೂ. ದಂಡ ಕೂಡ ವಿಧಿಸಲಾಗಿದೆ. ಈ 15 ಮಂದಿ ದೈಹಿಕ ಅಂತರ ಕಾಯ್ದುಕೊಳ್ಳದೆ ಎರಡು ವಾಹನಗಳಲ್ಲಿ ಸಂಚರಿಸಿದ್ದರಲ್ಲದೆ ಸಂಚಾರಕ್ಕೂ ಅಡ್ಡಿ ಉಂಟು ಮಾಡಿದ್ದರು. ಇನ್ನು ಸಂಚಾರಕ್ಕೆ ಅಡೆತಡೆ ಉಂಟುಮಾಡಿದ 30 ಮಂದಿ ವಾಹನ ಚಾಲಕರಿಗೆ ಕೂಡ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಕುಲ್ಲು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪ್ರತಿನಿತ್ಯ ಸುರಂಗದಲ್ಲಿ ಸುಮಾರು 1,500 ವಾಹನಗಳು ಓಡಾಡುತ್ತವೆ. ಆದರೆ 15 ಜನರನ್ನು ಬಂಧಿಸಿ ದಂಡ ವಿಧಿಸಿದ ದಿನದಂದು (ಭಾನುವಾರ) ಅತಿಹೆಚ್ಚು ಅಂದರೆ 5,450 ವಾಹನಗಳು ಸಂಚರಿಸಿದ್ದವು. 2,800 ವಾಹನಗಳು ಮನಾಲಿ ಕಡೆಯಿಂದ ಹಾಗೂ 2,650 ವಾಹನಗಳು ಲಾಹೌಲ್ ಕಡೆಯಿಂದ ಬಂದಿದ್ದವು.
ಇದನ್ನೂ ಓದಿ: ಹಿಮದ ಹೊದಿಕೆಯಲ್ಲಿ ಶಿಮ್ಲಾ.. ಸುಂದರ ದೃಶ್ಯ ನೀವೂ ಕಣ್ತುಂಬಿಕೊಳ್ಳಿ..
ಮನಾಲಿಯಿಂದ ಲಾಹೌಲ್ ಕಣಿವೆಯನ್ನು ವರ್ಷವಿಡೀ ಸಂಪರ್ಕಿಸುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ 'ಅಟಲ್ ಟನಲ್' ಅನ್ನು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 3 ರಂದು ಉದ್ಘಾಟಿಸಿದ್ದರು.