ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಎರಡು ಅಂಗಡಿಗಳಿಂದ ಬರೋಬ್ಬರಿ 1,400 ಲೀಟರ್ ನಕಲಿ ಸ್ಯಾನಿಟೈಸರ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಜಾರಿ ನಿರ್ದೇಶನಾಲಯದ ಕೋಲ್ಕತ್ತಾ ಶಾಖೆಯ ಅಧಿಕಾರಿಗಳು ಹಾಗೂ ಲಾಲ್ ಬಜಾರ್‌ನ ರೌಡಿ ನಿಗ್ರಹ ದಳದ ಅಧಿಕಾರಿಗಳು ನಿಖರ ಮಾಹಿತಿ ಮೇರೆಗೆ ಎಜ್ರಾ ಸ್ಟ್ರೀಟ್ನಲ್ಲಿರುವ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಇಲ್ಲಿ ಮಾರಾಟ ಮಾಡಲಾಗುತ್ತಿದ್ದ 1,400 ಲೀಟರ್ ನಕಲಿ ಸ್ಯಾನಿಟೈಸರ್ ವಶಪಡಿಸಿಕೊಂಡಿದ್ದಾರೆ.
ಸ್ಯಾನಿಟೈಸರ್ ಡಬ್ಬಗಳ ಮೇಲೆ ಯಾವುದೇ ಲೇಬಲ್ ಇಲ್ಲ. ಮನುಷ್ಯರ ಜೀವಕ್ಕೆ ಹಾನಿಕಾರಕವಾದ ರಾಸಾಯನಿಕಗಳು ಸ್ಯಾನಿಟೈಸರ್ನಲ್ಲಿ ಇಲ್ಲ ಎಂಬುದನ್ನು ತೋರಿಸಲು ಮಾರಾಟಗಾರರ ಬಳಿ ದಾಖಲೆಪತ್ರ ಕೂಡ ಇಲ್ಲ. ಈ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.