ದಾವೋಸ್: ತನ್ನ ದೇಶದ ಮೇಲೆ ಸತತ ಮೂರು ತಿಂಗಳಿಂದ ಯುದ್ಧ ನಡೆಸುತ್ತಿರುವ ರಷ್ಯಾದ ವಿರುದ್ಧ ಎಲ್ಲ ರಾಷ್ಟ್ರಗಳು ಕಠಿಣ ನಿರ್ಬಂಧಗಳನ್ನು ಹೇರಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಶ್ವ ರಾಷ್ಟ್ರಗಳನ್ನು ಕೋರಿದ್ದಾರೆ. ರಷ್ಯಾದ ಎಲ್ಲ ಬ್ಯಾಂಕುಗಳ ಮೇಲೆ ನಿಷೇಧ, ತೈಲ ನಿರ್ಬಂಧ ಮತ್ತು ವ್ಯಾಪಾರ ನಿಲ್ಲಿಸುವುದು ಸೇರಿದಂತೆ ಗರಿಷ್ಠ ನಿಷೇಧಗಳನ್ನು ವಿಧಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ಕರೆ ನೀಡಿದ್ದಾರೆ.
ದಾವೋಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ವಾರ್ಷಿಕ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಉಕ್ರೇನ್ ಅಧ್ಯಕ್ಷ, ಕ್ರೂರ ಗುಂಪೊಂದು ಜಗತ್ತನ್ನು ಆಳುತ್ತದೆಯೇ ಎಂದು ನಿರ್ಧರಿಸುವ ಕ್ಷಣ ಇದಾಗಿದೆ. ಅಂತಹ ದೇಶವಾದ ರಷ್ಯಾದ ಮೇಲೆ ಗರಿಷ್ಠ ನಿರ್ಬಂಧಗಳನ್ನು ಹೇರಬೇಕು. ಆ ದೇಶದೊಂದಿಗೆ ವ್ಯಾಪಾರವನ್ನು ಕಡಿದುಕೊಳ್ಳುವ ಮೂಲಕ ಬ್ಯಾಂಕ್ ವ್ಯವಹಾರ, ತೈಲದ ಮೇಲೂ ನಿರ್ಬಂಧ ಹೇರಿ. ನಮಗೆ ಮೌಲ್ಯಗಳು ಮುಖ್ಯವಾಗಬೇಕು ಎಂದು ಹೇಳಿದ್ದಾರೆ.
ಉಕ್ರೇನ್ಗೆ ಸಹಾಯ ಮಾಡಿ: ನಮ್ಮ ದೇಶದ ಯಾವುದೇ ಭೂಭಾಗದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತೇವೆ. ಈಗಾಗಲೇ ಡೆನ್ಮಾರ್ಕ್ ಮತ್ತು ಯುರೋಪಿಯನ್ ಒಕ್ಕೂಟ ಕೆಲ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿವೆ. ಇತರ ರಾಷ್ಟ್ರಗಳು ಉಕ್ರೇನ್ನಲ್ಲಿ ವ್ಯಾಪಾರ, ಹೂಡಿಕೆಗೆ ಮುಂದೆ ಬರಬೇಕು ಎಂದು ಕೋರಿದರು. ಕ್ರಿಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ ಕೆಲವು ರಾಷ್ಟ್ರಗಳು ಎಂದಿನಂತೆ ವ್ಯಾಪಾರಕ್ಕೆ ಮರಳುವ ಮೂಲಕ ರಷ್ಯಾದ ತಪ್ಪನ್ನು ಖಂಡಿಸುತ್ತಿಲ್ಲ ಎಂದು ಇದೇ ವೇಳೆ ಟೀಕಿಸಿದರು.
ರಷ್ಯಾದ ದಾಳಿ ಪ್ರಪಂಚದಾದ್ಯಂತ ಬಡತನ ಮತ್ತು ಹತಾಶೆ ಪ್ರಚೋದಿಸುವುದಾಗಿದೆ. ಮತ್ತೊಂದು ಯುದ್ಧದಿಂದ ವಿಶ್ವವನ್ನು ರಕ್ಷಿಸಲು ಪ್ರಪಂಚವು ನಿರ್ಬಂಧ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಗತ್ತು ಒಗ್ಗೂಡಬೇಕು. ಜಗತ್ತು ತನ್ನ ಏಕತೆ ಕಳೆದುಕೊಳ್ಳಬಾರದು. ನಾವು ಈ ಯುದ್ಧವನ್ನು ಗೆಲ್ಲಬೇಕಾಗಿದೆ. ಅದಕ್ಕೆ ನಮಗೆ ನಿಮ್ಮ ಬೆಂಬಲ ಬೇಕು ಎಂದು ಉಕ್ರೇನ್ ಅಧ್ಯಕ್ಷ ಹೇಳಿದರು.
ಓದಿ: ಕೋವಿಡ್ ವೇಳೆ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸಿದ 10 ಲಕ್ಷ 'ಆಶಾ'ವಾದಿಗಳಿಗೆ WHO ಗೌರವ!