ವಾಷಿಂಗ್ಟನ್ ಡಿಸಿ (ಅಮೆರಿಕ) : 2024 ರ ಚುನಾವಣೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಈ ಬೆನ್ನಲ್ಲೇ ವಿವೇಕ್ ರಾಮಸ್ವಾಮಿ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಭಾರತೀಯ - ಅಮೆರಿಕನ್ ಶಾಸಕರು, "ಅಮೆರಿಕ ಎದುರಿಸುತ್ತಿರುವ "ದೊಡ್ಡ ಬೆದರಿಕೆ"ಗಳಲ್ಲಿ ಚೀನಾವೂ ಒಂದು. ನಾನು ಅಧಿಕಾರಕ್ಕೆ ಬಂದರೆ ಬೀಜಿಂಗ್‌ನೊಂದಿಗೆ ಸಂಪೂರ್ಣ ವ್ಯವಹಾರವನ್ನು ಅಂತ್ಯಗೊಳಿಸುತ್ತೇನೆ. ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ವೃದ್ಧಿಸುವ ಗುರಿ ಹೊಂದಲಾಗಿದೆ" ಅವರು ಹೇಳಿದರು.
ಕ್ಸಿ ಜಿನ್‌ಪಿಂಗ್ ಸರ್ವಾಧಿಕಾರಿಯಾಗಿದ್ದು, ಚೀನಾ ದೇಶವು ಯುನೈಟೆಡ್ ಸ್ಟೇಟ್ಸ್ ಎದುರಿಸುತ್ತಿರುವ ಪ್ರಮುಖ ಬೆದರಿಕೆಯಾಗಿದೆ. ಚೀನಾದಿಂದ ಆರ್ಥಿಕ ಸ್ವಾತಂತ್ರ್ಯ ಘೋಷಿಸುವಲ್ಲಿ ಸ್ಪಷ್ಟವಾದ ಯೋಜನೆಗಳನ್ನು ಜಾರಿಗೆ ತರುತ್ತೇನೆ. ಆದ್ದರಿಂದ ನಾನು ಸ್ಪಷ್ಟ ಅಭ್ಯರ್ಥಿ ಎಂದು ಭಾವಿಸುತ್ತೇನೆ. ಇದು ನಮ್ಮ ನೀತಿಯ ಮೊದಲ ಹೆಜ್ಜೆಯಾಗಿದೆ. ಹೆಚ್ಚಿನ ಅಮೆರಿಕ ಕಂಪನಿಗಳು ಚೀನಾದೊಂದಿಗೆ ವ್ಯಾಪಾರ ಮಾಡುವುದನ್ನು ನಿಷೇಧಿಸುತ್ತೇನೆ. ಇದು ಅಲ್ಪಾವಧಿಯ ಪರಿಣಾಮ ಉಂಟಾಗಬಹುದು. ನಾವು ಯಾವುದಕ್ಕಾಗಿ ತ್ಯಾಗ ಮಾಡುತ್ತಿದ್ದೇವೆ ಎಂದು ತಿಳಿದಿದ್ದರೆ ಯಾವುದೇ ಹಾನಿ ಉಂಟಾಗುವುದಿಲ್ಲ. ಜಪಾನ್, ದಕ್ಷಿಣ ಕೊರಿಯಾ, ಫಿಲಿಪೈನ್ಸ್, ಭಾರತ, ಥಾಯ್ಲೆಂಡ್, ವಿಯೆಟ್ನಾಂ, ಬ್ರೆಜಿಲ್‌ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಲು ನಾವು ಸಿದ್ಧರಿದ್ದೇವೆ ಎಂದರು.
ಇದನ್ನೂ ಓದಿ : US black China based firms: ಕಾರ್ಮಿಕರ ಬಲವಂತದ ದುಡಿಮೆ: ಚೀನಾದ ಎರಡು ಕಂಪನಿಗಳನ್ನು ನಿಷೇಧಿಸಿದ ಅಮೆರಿಕ
ರಷ್ಯಾ ಮತ್ತು ಚೀನಾ ನಡುವಿನ ಸಂಬಂಧಗಳ ಬಗ್ಗೆ ನಾವು ಗಮನ ಹರಿಸಬೇಕಾಗಿದೆ. ಈ ಎರಡೂ ದೇಶಗಳ ಮೈತ್ರಿಯ ನಡುವೆ ಬಿರುಕು ಮೂಡಿಸಬೇಕು. ಎರಡು ವಿಭಿನ್ನ ಪರಮಾಣು ಶಕ್ತಿಗಳನ್ನು ಹೊಂದಿರುವ ರಷ್ಯಾ ಮತ್ತು ಚೀನಾದೊಂದಿಗೆ ಅಮೆರಿಕ ಸಂಬಂಧ ಹೊಂದಲು ಇಷ್ಟಪಡುವುದಿಲ್ಲ. ಈ ರಾಷ್ಟ್ರಗಳು ನಾವು ಎದುರಿಸುತ್ತಿರುವ ಏಕೈಕ ಅತಿದೊಡ್ಡ ಮಿಲಿಟರಿ ಬೆದರಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.
ವಿವೇಕ್ ರಾಮಸ್ವಾಮಿ ಯಾರು?: ಶಾಸಕ ವಿವೇಕ್ ರಾಮಸ್ವಾಮಿ (37) ಅವರು ಆಗಸ್ಟ್ 9, 1985 ರಂದು ಜನಿಸಿದರು. ಓಹಿಯೋದ ಸಿನ್ಸಿನಾಟಿಯಲ್ಲಿ ಬೆಳೆದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡಿದ್ದು, ನಂತರ ಯೇಲ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು ಕೊಂಡಿದ್ದಾರೆ. ಅವರ ಪೋಷಕರು ಕೇರಳದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದು, ಅವರ ತಾಯಿ ಜೆರಿಯಾಟ್ರಿಕ್ ಮನೋವೈದ್ಯರಾಗಿದ್ದರು ಮತ್ತು ತಂದೆ ಜನರಲ್ ಎಲೆಕ್ಟ್ರಿಕ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಧ್ಯಕೀಯ ಚುನಾವಣೆಗೂ ಮುನ್ನ ನಡೆಯುವ ಪಕ್ಷಗಳ ಆಂತರಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಲಿರುವ ನಿಕ್ಕಿ ಹ್ಯಾಲಿ ಮತ್ತು ಹರ್ಷ್ ವರ್ಧನ್ ಸಿಂಗ್ ಅವರೊಂದಿಗೆ ಅವರು ಮೂರನೇ ಅಭ್ಯರ್ಥಿಯಾಗಿ ಭಾರತೀಯ-ಅಮೆರಿಕನ್ ವಿವೇಕ್ ಸ್ಪರ್ಧೆಗಿಳಿಯಲಿದ್ದಾರೆ.
ಇದನ್ನೂ ಓದಿ : ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ಕೊಲೆ ಬೆದರಿಕೆ.. ಶಂಕಿತನನ್ನು ಹೊಡೆದುರುಳಿಸಿದ ಎಫ್ಬಿಐ