ಬರ್ಲಿನ್: ಪ್ರಾಯೋಗಿಕ ಕಾರ್ಯಾಚರಣೆಗಳು ಪ್ರಾರಂಭವಾದ ಸುಮಾರು ನಾಲ್ಕು ವರ್ಷಗಳ ನಂತರ ಹೈಡ್ರೋಜನ್ ಚಾಲಿತ ವಿಶ್ವದ ಮೊದಲ ಪ್ರಯಾಣಿಕ ರೈಲು ಜಾಲ ಜರ್ಮನ್ ಫೆಡರಲ್ ರಾಜ್ಯ ಲೋವರ್ ಸ್ಯಾಕ್ಸೋನಿಯಲ್ಲಿ ಪ್ರಾರಂಭಗೊಂಡಿದೆ.
ಫ್ರೆಂಚ್ ತಯಾರಕ ಅಲ್‌ಸ್ಟೋಮ್ ಉತ್ಪಾದಿಸುವ ಹೈಡ್ರೋಜನ್ ಇಂಧನ ಸೆಲ್ ಡ್ರೈವ್ ಹೊಂದಿರುವ 14 ರೈಲುಗಳನ್ನು ಡೀಸೆಲ್ ರೈಲುಗಳ ಜಾಗಕ್ಕೆ ಬದಲಾಯಿಸಲಾಗುವುದು ಎಂದು ಲೋವರ್ ಸ್ಯಾಕ್ಸೋನಿಯ ಸ್ಥಳೀಯ ಸಾರಿಗೆ ಪ್ರಾಧಿಕಾರ ಬುಧವಾರ ಉಲ್ಲೇಖಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈಗಾಗಲೇ ಐದು ಹೊಸ ರೈಲುಗಳು ಕಾರ್ಯಾಚರಣೆಯಲ್ಲಿದ್ದು, ಉಳಿದವುಗಳು ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿವೆ.
"ಈ ಯೋಜನೆಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನವೀಕರಿಸಬಹುದಾದ ಶಕ್ತಿಗಳ ರಾಜ್ಯವಾಗಿ ನಾವು ಸಾರಿಗೆ ವಲಯದಲ್ಲಿ ಹವಾಮಾನ ತಟಸ್ಥತೆಯ ಹಾದಿಯಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸುತ್ತಿದ್ದೇವೆ" ಎಂದು ಲೋವರ್ ಸ್ಯಾಕ್ಸೋನಿಯ ಅಧ್ಯಕ್ಷ ಸ್ಟೀಫನ್ ವೇಲ್ ಅಭಿಪ್ರಾಯಪಟ್ಟಿದ್ದಾರೆ.
ಎರಡು ವರ್ಷಗಳ ಪ್ರಾಯೋಗಿಕ ಕಾರ್ಯಾಚರಣೆಗಳಲ್ಲಿ, ಎರಡು ಪೂರ್ವ-ಸರಣಿ ರೈಲುಗಳು ಯಾವುದೇ ಸಮಸ್ಯೆಗಳಿಲ್ಲದೆ ಓಡಿವೆ. ಈ ಯೋಜನೆಗೆ ಸುಮಾರು 93 ಮಿಲಿಯನ್ ಯುರೋಗಳು ವೆಚ್ಚವಾಗಿದೆ. Coradia iLint ಹೊರಸೂಸುವಿಕೆ-ಮುಕ್ತ ಹೈಡ್ರೋಜನ್ ಇಂಧನ ಕೋಶ ರೈಲುಗಳು 1,000 ಕಿ.ಮೀ ವ್ಯಾಪ್ತಿಯ ಸಾಮರ್ಥ್ಯ ಹೊಂದಿದ್ದು, ಕೇವಲ ಒಂದು ಟ್ಯಾಂಕ್ ಹೈಡ್ರೋಜನ್‌ನಲ್ಲಿ ದಿನವಿಡೀ ಓಡುತ್ತದೆ ಎಂದು ಎಲ್ಎನ್ವಿಜಿ ತಿಳಿಸಿದೆ.
ಎಲ್ಎನ್ವಿಜಿ ಪ್ರಕಾರ, ಗಂಟೆಗೆ ಗರಿಷ್ಠ 140 ಕಿ.ಮೀ ಓಡುವ ಈ ರೈಲುಗಳು 1.6 ಮಿಲಿಯನ್ ಲೀಟರ್ ಡೀಸೆಲ್ ಉಳಿಸುವ ಮೂಲಕ ವರ್ಷಕ್ಕೆ 4,400 ಟನ್ಗಳಷ್ಟು CO2 ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.
"ಭವಿಷ್ಯದಲ್ಲಿ ನಾವು ಯಾವುದೇ ಡೀಸೆಲ್ ರೈಲುಗಳನ್ನು ಖರೀದಿಸುವುದಿಲ್ಲ. ಈಗಾಗಲೇ ಬಳಸುತ್ತಿರುವ ಹಳೆಯ ಡೀಸೆಲ್ ರೈಲುಗಳನ್ನೂ ಮುಂದಿನ ದಿನಗಳಲ್ಲಿ ಬದಲಾಯಿಸಲಾಗುವುದು. ಆದರೆ ಅವುಗಳು ಹೈಡ್ರೋಜನ್ ಅಥವಾ ಬ್ಯಾಟರಿ ಚಾಲಿತ ರೈಲುಗಳಾಗಿರುತ್ತವೆಯೋ ಎಂಬುದನ್ನು ಕಂಪೆನಿ ಇನ್ನೂ ನಿರ್ಧರಿಸಿಲ್ಲ" ಎಂದು LNVG ವಕ್ತಾರ ಡಿರ್ಕ್ ಆಲ್ಟ್ವಿಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಲೆನಾಡ ಸೌಂದರ್ಯ ಸವಿಯಿರಿ: ಬೆಂಗಳೂರಿಂದ ಶಿವಮೊಗ್ಗಕ್ಕೆ ವಿಸ್ಟಾಡೋಮ್ ಪ್ರಯಾಣ ಶುರು