ಲಂಡನ್: ರಷ್ಯಾದ ಸೈನಿಕರು ನಮ್ಮ ದೇಶದ ಮೇಲೆ ನಡೆಸುತ್ತಿರುವ ಆಕ್ರಮಣದಲ್ಲಿ ಲೈಂಗಿಕ ದೌರ್ಜನ್ಯವನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಉಕ್ರೇನ್ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾ ಕಳವಳ ವ್ಯಕ್ತಪಡಿಸಿದ್ದಾರೆ. ಉಕ್ರೇನಿಯನ್ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ರಷ್ಯಾದ ಸೈನಿಕರ ಪತ್ನಿಯರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಯುದ್ಧಗಳು ಮತ್ತು ಗಲಭೆಗಳ ಸಮಯದಲ್ಲಿ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ವಿಷಯದ ಕುರಿತು ಲಂಡನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಪತ್ನಿ ಝೆಲೆನ್ಸ್ಕಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ದೇಶದಲ್ಲಿ ಯುದ್ಧದ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮಾಸ್ಕೋದ ಮಿಲಿಟರಿ ಕಾರ್ಯಾಚರಣೆ ಶುರು ಮಾಡಿದಂದಿನಿಂದಲೂ ಆಕ್ರಮಣಕಾರರು ತಮ್ಮ ದೇಶದಲ್ಲಿ ಬಹಿರಂಗವಾಗಿ ಲೈಂಗಿಕ ಹಿಂಸಾಚಾ ಎಸಗುತ್ತಿದ್ದಾರೆ ಎಂದು ಹೇಳಿದರು.
"ಲೈಂಗಿಕ ಹಿಂಸೆ ತನ್ನ ಪ್ರಾಬಲ್ಯವನ್ನು ಪ್ರತಿಪಾದಿಸುವ ಅತ್ಯಂತ ಕ್ರೂರ ಮಾರ್ಗ. ಯುದ್ಧದ ಸಮಯದಲ್ಲಿ ಅಂತಹ ಘಟನೆಗಳು ಸಂಭವಿಸಿದಾಗ ಸಂತ್ರಸ್ತರು ಈ ವಿಷಯವನ್ನು ಬಹಿರಂಗಪಡಿಸಲು ಹೆದರುತ್ತಿದ್ದಾರೆ. ಇದು ಅವರು (ರಷ್ಯಾದ ಪಡೆಗಳು) ನಮ್ಮ ದೇಶದಲ್ಲಿ ಬಳಸುತ್ತಿರುವ ಮತ್ತೊಂದು ಅಸ್ತ್ರ" ಎಂದರು.
"ಅತ್ಯಂತ ವ್ಯವಸ್ಥಿತವಾಗಿ ಮತ್ತು ಬಹಿರಂಗವಾಗಿ ಲೈಂಗಿಕ ದೌರ್ಜನ್ಯ ಎಸಗುವ ರಷ್ಯಾದ ಸೈನಿಕರಿಗೆ ಅವರ ಪತ್ನಿಯರು ಮತ್ತು ಸಂಬಂಧಿಕರು ಬೆಂಬಲವಾಗಿ ನಿಂತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪತಿಯಂದಿರಿಗೆ ಉಕ್ರೇನಿಯನ್ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಂತೆ ಪತ್ನಿಯರು ಹೇಳುತ್ತಿದ್ದಾರೆ" ಎಂದು ಝೆಲೆನ್ಸ್ಕಾ ಗಂಭೀರವಾಗಿ ಆರೋಪಿಸಿದರು. ಹೀಗಾಗಿ, ಇಂಥ ಕ್ರೌರ್ಯವನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು. ಇಂತಹ ಯುದ್ಧಾಪರಾಧ ಎಸಗಿದವರನ್ನು ಗುರುತಿಸಿ ಶಿಕ್ಷೆ ನೀಡುವುದು ಅತೀ ಅಗತ್ಯ ಎಂದು ಆಗ್ರಹಿಸಿದರು.
ಈ ಹಿಂದೆ ಉಕ್ರೇನ್‌ನ ಹಲವು ನಗರಗಳನ್ನು ವಶಪಡಿಸಿಕೊಂಡ ಮಾಸ್ಕೋ ಸೇನೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದವು ಎಂಬ ವರದಿಗಳು ಬಂದಿದ್ದವು. ಮಕ್ಕಳ ಮೇಲೆ ನಡೆಸುತ್ತಿರುವ ಈ ದೌರ್ಜನ್ಯಗಳನ್ನು ಉಕ್ರೇನ್ ಈಗಾಗಲೇ ಹಲವು ಬಾರಿ ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತಂದಿದೆ.
ಇದನ್ನೂ ಓದಿ: ಅಮೆರಿಕ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಮಸೂದೆಗೆ ಸೆನೆಟ್ ಒಪ್ಪಿಗೆ