ನೈರೋಬಿ: ದೇಶದ ಒರೊಮಿಯಾ ಪ್ರದೇಶದಲ್ಲಿ ನಡೆದ ಜನಾಂಗೀಯ ದಾಳಿಯಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ ಬಂಡುಕೋರರ ಗುಂಪನ್ನು ಇಥಿಯೋಪಿಯಾದ ಜನರು ದೂಷಿಸುತ್ತಿರುವುದು ಕಂಡು ಬಂದಿದೆ.
ಆಫ್ರಿಕಾದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಜನಾಂಗೀಯ ಉದ್ವಿಗ್ನತೆ ಮುಂದುವರಿದಿದೆ. ಈ ಜನಾಂಗೀಯ ದಾಳಿಯಲ್ಲಿ ಅಂಹರಾ ಸಮುದಾಯದ ಸುಮಾರು 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯ ಭಯಾನಕ ದಾಳಿಯಿಂದ ಬದುಕುಳಿದ ಗಿಂಬಿ ಕೌಂಟಿಯ ನಿವಾಸಿ ಅಬ್ದುಲ್-ಸೀದ್ ತಾಹಿರ್ ಮಾತನಾಡಿ, ನಾನು 230 ದೇಹಗಳನ್ನು ಎಣಿಸಿದ್ದೇನೆ. ಇದು ನಮ್ಮ ಜೀವಿತಾವಧಿಯಲ್ಲಿ ನಾವು ನೋಡಿದ ಮಾರಣಾಂತಿಕ ದಾಳಿಯಾಗಿದೆ. ಮೃತರನ್ನು ಸಾಮೂಹಿಕ ಸಮಾಧಿ ಮಾಡುತ್ತಿದ್ದೇವೆ. ನಾವು ಇನ್ನೂ ದೇಹಗಳನ್ನು ಸಂಗ್ರಹಿಸುತ್ತಿದ್ದೇವೆ. ಫೆಡರಲ್ ಸೇನಾ ಪಡೆಗಳು ಈಗ ಸ್ಥಳಕ್ಕೆ ಬಂದಿವೆ. ಆದರೆ ಈ ಪಡೆಗಳು ತೊರೆದರೆ ದಾಳಿಗಳು ಮುಂದುವರಿಯಬಹುದು ಎಂದು ನಾವು ಭಯಪಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಓದಿ: ಮನೆಗೆ ನುಗ್ಗಿ ಸುತ್ತಿಗೆ-ಚಾಕುವಿನಿಂದ ದಾಳಿ: ಪ್ರೇಯಸಿ, ಆಕೆಯ ತಮ್ಮನ ಕೊಲೆ, ತಾಯಿ ಸ್ಥಿತಿ ಗಂಭೀರ
ಮತ್ತೊಂದು ಸುತ್ತಿನ ಸಾಮೂಹಿಕ ಹತ್ಯೆಗಳು ಸಂಭವಿಸುವ ಮೊದಲು ಅಂಹರಾ ಸಮುದಾಯವು ತನ್ನ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ತೀವ್ರವಾಗಿ ಪ್ರಯತ್ನಿಸುತ್ತಿದ್ದೇವೆ. ಸುಮಾರು 30 ವರ್ಷಗಳ ಹಿಂದೆ ಪುನರ್ವಸತಿ ಕಾರ್ಯಕ್ರಮಗಳಲ್ಲಿ ನೆಲೆಸಿದ್ದ ಅಂಹರಾ ಜನಾಂಗವನ್ನು ಈಗ ಕೋಳಿಗಳಂತೆ ಕೊಲ್ಲಲಾಗುತ್ತಿದೆ. ಎಂದು ಮತ್ತೊಬ್ಬ ಸಾಕ್ಷಿ ಶಾಂಬೆಲ್ ಹೇಳಿದ್ದಾರೆ.
ಇಬ್ಬರೂ ಸಾಕ್ಷಿಗಳು ದಾಳಿಗೆ ಓರೊಮೊ ಲಿಬರೇಶನ್ ಆರ್ಮಿಯನ್ನು ದೂಷಿಸಿದರು. ಒರೊಮಿಯಾ ಪ್ರಾದೇಶಿಕ ಸರ್ಕಾರವು OLA ಅನ್ನು ದೂಷಿಸಿದೆ. ಫೆಡರಲ್ ಭದ್ರತಾ ಪಡೆಗಳು ಪ್ರಾರಂಭಿಸಿದ ಕಾರ್ಯಾಚರಣೆಗಳನ್ನು ವಿರೋಧಿಸಲು ಸಾಧ್ಯವಾಗದ ನಂತರ ಬಂಡುಕೋರರು ದಾಳಿ ಮಾಡಿದ್ದಾರೆ ಎಂದು ಹೇಳಿದರು. ಆದ್ರೆ ಈ ಆರೋಪಗಳನ್ನು OLA ವಕ್ತಾರ ಓಡಾ ಟಾರ್ಬೀ ನಿರಾಕರಿಸಿದ್ದಾರೆ.
ಇಥಿಯೋಪಿಯಾದ ಹಲವಾರು ಪ್ರದೇಶಗಳಲ್ಲಿ ಜನಾಂಗೀಯ ದಾಳಿ ನಡೆಯುತ್ತಲೇ ಇರುತ್ತೆ. ಇಥಿಯೋಪಿಯಾದ 110 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯ ಪೈಕಿ ಎರಡನೇ ಅತಿದೊಡ್ಡ ಜನಾಂಗೀಯ ಗುಂಪಾದ ಅಂಹರಾ ಸಮುದಾಯದ ಜನರು ಒರೊಮಿಯಾದಂತಹ ಪ್ರದೇಶಗಳಲ್ಲಿ ಆಗಾಗ್ಗೆ ದಾಳಿಗೆ ಬಲಿಯಾಗುತ್ತಲೇ ಇದ್ದಾರೆ.
ಸರ್ಕಾರ ನೇಮಿಸಿದ ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗವು ನಾಗರಿಕರ ಹತ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಅಂತಹ ದಾಳಿಯಿಂದ ಅವರನ್ನು ರಕ್ಷಿಸಲು ಫೆಡರಲ್ ಸರ್ಕಾರಕ್ಕೆ ಭಾನುವಾರ ಕರೆ ನೀಡಿದೆ.