ಪ್ಯಾರಿಸ್(ಫ್ರಾನ್ಸ್): ಭಾರತ ರಫ್ತು ನಿಷೇಧಿಸಿದ ನಂತರ ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆ ಹೊಸ ದಾಖಲೆ ನಿರ್ಮಿಸಿದೆ. ಐರೋಪ್ಯ ಮಾರುಕಟ್ಟೆಗಳು ಪ್ರಾರಂಭವಾಗುತ್ತಿದ್ದಂತೆ ಗೋಧಿ ಧಾರಣೆ ಪ್ರತಿ ಟನ್‌ಗೆ 35,273 ರೂಪಾಯಿಗೆ (453 ಡಾಲರ್) ಜಿಗಿಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದಂತೆ ಜಿ7 ರಾಷ್ಟ್ರಗಳ ನಾಯಕರು ಭಾರತದ ನಡೆಯನ್ನು ಟೀಕಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಬೆನ್ನಿಗೆ ಚೀನಾ ನಿಂತಿರುವುದು ಅಚ್ಚರಿ ಹುಟ್ಟಿಸಿದೆ.
ಜಗತ್ತಿನ ಮಾರುಕಟ್ಟೆಗೆ ಶೇಕಡಾ 12ರಷ್ಟು ಗೋಧಿ ಪೂರೈಕೆ ಮಾಡುತ್ತಿದ್ದ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಪ್ರಾರಂಭಿಸಿದ ನಂತರದಲ್ಲಿ ಗೋಧಿ ಪೂರೈಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಈ ಮಧ್ಯೆ ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತ ರಫ್ತು ನಿಷೇಧಿಸಿದ್ದು ದಿಢೀರ್ ಬೆಲೆ ಗಗನಕ್ಕೇರಿದೆ. ಮೇ 13ರ ಕೇಂದ್ರದ ಅಧಿಸೂಚನೆಯ ಪ್ರಕಾರ, ಭಾರತ ಸರ್ಕಾರವು ತನ್ನ ಆಹಾರ ಭದ್ರತೆಯನ್ನು ಖಾತ್ರಿಪಡಿಸಲು ಸಾಗರೋತ್ತರ ಗೋಧಿ ಮಾರಾಟ ಸ್ಥಗಿತಗೊಳಿಸುತ್ತಿದೆ ಎಂದು ಹೇಳಿತ್ತು.
ಇದನ್ನೂ ಓದಿ: ದೇಶದಲ್ಲಿ ಬೆಲೆ ಏರಿಕೆ ಹತ್ತಿಕ್ಕಲು ಗೋಧಿ ರಫ್ತನ್ನೇ ನಿಲ್ಲಿಸಿದ ಕೇಂದ್ರ.. ಈರುಳ್ಳಿ ಬೀಜಕ್ಕೆ ಗ್ರೀನ್ ಸಿಗ್ನಲ್!
ಗೋಧಿ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಭಾರತ, ಉಕ್ರೇನ್ ಯುದ್ಧದಿಂದ ಉಂಟಾದ ಕೆಲವು ಪೂರೈಕೆ ಕೊರತೆ ತುಂಬಲು ಸಹಾಯ ಮಾಡಲು ಸಿದ್ಧ ಎಂದು ಈ ಹಿಂದೆ ಹೇಳಿತ್ತು. ಆದರೆ ಈಗ ಗೋಧಿ ರಫ್ತು ನಿಷೇಧಿಸಿದೆ. ಭಾರತದ ಕ್ರಮಗಳು ವಿಶ್ವದ ಆಹಾರ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತವೆ ಎಂದು ಜಿ7 ಟೀಕಿಸಿತು.
ಚೀನಾ ಬೆಂಬಲ: ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಜಾಗತಿಕ ಆಹಾರ ಬಿಕ್ಕಟ್ಟನ್ನು ಪರಿಹಾರವಲ್ಲ. ಗೋಧಿ ರಫ್ತಿನ ಮೇಲೆ ಭಾರತ ನಿಷೇಧ ಹೇರಬಾರದು ಎಂದು ಜಿ7 ಕೃಷಿ ಸಚಿವರು ಆಗ್ರಹಿಸುತ್ತಿದ್ದಾರೆ. ಆದ್ರೆ, ಜಿ7 ರಾಷ್ಟ್ರಗಳು ತಮ್ಮ ರಫ್ತುಗಳನ್ನು ಹೆಚ್ಚಿಸುವ ಮೂಲಕ ಆಹಾರ ಮಾರುಕಟ್ಟೆ ಪೂರೈಕೆಯನ್ನು ಸ್ಥಿರಗೊಳಿಸಲು ಏಕೆ ಮುಂದಾಗುತ್ತಿಲ್ಲ? ಎಂದು ಚೀನಾ ಪ್ರಶ್ನಿಸಿದೆ.
ಯುಎಸ್ಎ, ಕೆನಡಾ, ಆಸ್ಟ್ರೇಲಿಯಾ, ಇಯು ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳು ಪ್ರಮುಖ ಗೋಧಿ ರಫ್ತುದಾರರು. ಆಹಾರ ಬಿಕ್ಕಟ್ಟಿನ ದೃಷ್ಟಿಯಿಂದ ಕೆಲವು ಪಾಶ್ಚಿಮಾತ್ಯ ದೇಶಗಳು ಈಗಾಗಲೇ ರಫ್ತು ಕಡಿಮೆ ಮಾಡಿವೆ. ಹೀಗಿರುವಾಗ ಸ್ವದೇಶದಲ್ಲಿ ಆಹಾರ ಭದ್ರತೆಗಾಗಿ ಭಾರತದ ನಿರ್ಧಾರವನ್ನು ಟೀಕಿಸುವ ಹಕ್ಕು ಆ ದೇಶಗಳಿಗೆ ಇರುವುದಿಲ್ಲ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವಷ್ಟು ಆಹಾರ ಬಿಕ್ಕಟ್ಟಿಗೆ ಪರಿಹಾರವಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.