ನ್ಯೂಯಾರ್ಕ್ (ಅಮೆರಿಕ) : ಇಸ್ರೇಲ್ ಮತ್ತು ಹಮಾಸ್ ನಡುವೆ ಕಳೆದ 2 ತಿಂಗಳಿಗೂ ಹೆಚ್ಚು ದಿನದಿಂದ ಯುದ್ಧ ನಡೆಯುತ್ತಿದೆ. ಈ ನಡುವೆ ಒಂದು ವಾರ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಒಂದು ವಾರದ ಬಳಿಕ ಇಸ್ರೇಲ್ ಮತ್ತೆ ಯುದ್ಧ ಆರಂಭಿಸಿದೆ. ಈ ಮಧ್ಯೆ, ಗಾಜಾದಲ್ಲಿ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾವನೆ ಮಂಡಿಸಲಾಗಿದೆ. ಯುಎಇಯ ಈ ಪ್ರಸ್ತಾವನೆಯನ್ನು ಅಮೆರಿಕ ವೀಟೋ ಮಾಡಿದ್ದರಿಂದ ಪ್ರಸ್ತಾವ ತಿರಸ್ಕಾರಗೊಂಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಸ್ತುತಪಡಿಸಿದ ಈ ನಿರ್ಣಯದಲ್ಲಿ "ಗಾಜಾದಲ್ಲಿ ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಮತ್ತು ಎಲ್ಲ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು" ಎಂಬ ಬೇಡಿಕೆ ಇಡಲಾಗಿತ್ತು. ಆದರೆ, ಈ ಪ್ರಸ್ತಾಪಕ್ಕೆ ಅಮೆರಿಕ ಅಡ್ಡಿಪಡಿಸಿದೆ. ಇದರಿಂದಾಗಿ ಪ್ರಸ್ತಾಪವನ್ನು ಅಮೆರಿಕ ಭದ್ರತಾ ಮಂಡಳಿಯಲ್ಲಿ ಅಂಗೀಕರಿಸಲಾಗಲಿಲ್ಲ.
ಇದನ್ನೂ ಓದಿ : ಇಸ್ರೇಲ್ - ಹಮಾಸ್ ಯುದ್ಧ: ಆಹಾರ, ನೀರಿನ ಕೊರತೆಯಿಂದ ಹತಾಶೆಗೊಂಡ ಪ್ಯಾಲೆಸ್ಟೀನಿಯರು: ವಿಶ್ವಸಂಸ್ಥೆ ಕಳವಳ
13 ದೇಶಗಳು ಯುಎಇ ಮಂಡಿಸಿದ ಪ್ರಸ್ತಾಪದ ಪರವಾಗಿ ಮತ ಚಲಾಯಿಸಿದರೆ, ಅಮೆರಿಕವು ಅದರ ವಿರುದ್ಧ ವೀಟೋ ಪವರ್ ಚಲಾಯಿಸಿತು. ಇದೇ ಸಮಯದಲ್ಲಿ ಬ್ರಿಟನ್ ಮತದಾನದಿಂದ ದೂರವೇ ಉಳಿಯಿತು. ಅಮೆರಿಕದ ಈ ನಿರ್ಧಾರವನ್ನು ಚೀನಾ ಮತ್ತು ರಷ್ಯಾ ದೇಶಗಳು ತೀವ್ರವಾಗಿ ಖಂಡಿಸಿವೆ. ರಷ್ಯಾವು ಅಮೆರಿಕವನ್ನು ಹೃದಯಹೀನ ಎಂದು ಕರೆದಿದೆ. ಗಾಜಾದಲ್ಲಿ ತಕ್ಷಣದ ಕದನ ವಿರಾಮ ಘೋಷಿಸದಿದ್ದರೆ ಸಾಕಷ್ಟು ಹಾನಿಯಾಗಲಿದೆ ಎಂದು ಬ್ರೆಜಿಲ್ ಕಳವಳ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಪ್ಯಾಲೇಸ್ಟಿನಿಯನ್ ರಾಯಭಾರಿ ಪ್ರಸ್ತಾವನೆಯ ವೈಫಲ್ಯವನ್ನು ವಿನಾಶಕಾರಿ ಎಂದು ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ, ಗಾಜಾ ಮೇಲಿನ ಇಸ್ರೇಲ್ ದಾಳಿಯು ಇನ್ನಷ್ಟು ದೌರ್ಜನ್ಯ, ಹತ್ಯೆಗಳು ಮತ್ತು ವಿನಾಶಕ್ಕೆ ಕಾರಣವಾಗುತ್ತದೆ ಎಂದು ಕಳವಳ ಕೂಡಾ ವ್ಯಕ್ತಪಡಿಸಿದ್ದಾರೆ. ಕಳೆದ ಅಕ್ಟೋಬರ್ 7 ರಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮುಂದುವರೆದಿದೆ.
ಹಮಾಸ್ ಇದ್ದಕ್ಕಿದ್ದಂತೆ ಐರೋಮ್ ಡೋಮ್ ರಕ್ಷಣಾ ಕೋಟೆ ಭೇದಿಸಿ ಇಸ್ರೇಲ್ ಮೇಲೆ ದಾಳಿ ನಡೆಸಿ, ಸಾವಿರಾರು ಮಂದಿಯ ಮಾರಣ ಹೋಮ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಹಮಾಸ್ ಮೇಲೆ ಯುದ್ಧ ಘೋಷಣೆ ಮಾಡಿತ್ತು.
ಇದನ್ನೂ ಓದಿ : ಹಮಾಸ್ ಪ್ರಧಾನ ಭದ್ರತಾ ಕಚೇರಿ ಧ್ವಂಸಗೊಳಿಸಿದ ಇಸ್ರೇಲ್
UN ಭದ್ರತಾ ಮಂಡಳಿ: ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಒಟ್ಟು 15 ಸದಸ್ಯರಿದ್ದಾರೆ. ಐದು ಖಾಯಂ ಮತ್ತು 10 ತಾತ್ಕಾಲಿಕ ಸದಸ್ಯರಿದ್ದಾರೆ. ಖಾಯಂ ಸದಸ್ಯರಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ಸೇರಿವೆ. ಆದರೆ, ತಾತ್ಕಾಲಿಕ ಸದಸ್ಯರಲ್ಲಿ ಅಲ್ಬೇನಿಯಾ, ಬ್ರೆಜಿಲ್, ಈಕ್ವೆಡಾರ್, ಗ್ಯಾಬಾನ್, ಘಾನಾ, ಜಪಾನ್, ಮಾಲ್ಟಾ, ಮೊಜಾಂಬಿಕ್, ಸ್ವಿಟ್ಜರ್ಲ್ಯಾಂಡ್ ಮತ್ತು ಯುಎಇ ಸೇರಿವೆ.