ವಾಶಿಂಗ್ಟನ್ : ಉಕ್ರೇನ್ನ ಪೈಲಟ್ಗಳಿಗೆ ಎಫ್-16 ಫೈಟರ್ ಜೆಟ್ ತರಬೇತಿ ನೀಡಲು ಅಮೆರಿಕ ಮುಂದಾಗಿದೆ. ದೇಶದ ದಕ್ಷಿಣದ ಎರಡು ರಾಜ್ಯಗಳಲ್ಲಿರುವ ವಾಯುಪಡೆಯ ನೆಲೆಗಳಲ್ಲಿ ಉಕ್ರೇನ್ ಪೈಲಟ್ಗಳಿಗೆ ಅಮೆರಿಕ ಸೆಪ್ಟೆಂಬರ್ನಿಂದ ಎಫ್-16 ಫೈಟರ್ ಜೆಟ್ ತರಬೇತಿ ನೀಡಲಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪ್ರಕಟಿಸಿದೆ.
ಟೆಕ್ಸಾಸ್ನ ಲ್ಯಾಕ್ಲ್ಯಾಂಡ್ ಏರ್ ಫೋರ್ಸ್ ಬೇಸ್ನಲ್ಲಿ ಇಂಗ್ಲಿಷ್ ಭಾಷಾ ತರಗತಿಗಳೊಂದಿಗೆ ಸೆಪ್ಟೆಂಬರ್ನಲ್ಲಿ ತರಬೇತಿ ಪ್ರಾರಂಭವಾಗಲಿದೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಪ್ಯಾಟ್ ರೈಡರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತರಬೇತಿ ಪಡೆಯುವ ಪೈಲಟ್ಗಳು ಅಗತ್ಯವಾದ ಭಾಷಾ ಕೌಶಲ್ಯಗಳನ್ನು ಗ್ರಹಿಸಿದ ನಂತರ, ಎಫ್ -16 ಅನ್ನು ನಿಜವಾಗಿ ಹೇಗೆ ಹಾರಿಸುವುದು ಎಂಬುದರ ಕುರಿತು ಅವರಿಗೆ ತರಬೇತಿ ನೀಡಲಾಗುವುದು ಮತ್ತು ಈ ಪ್ರಕ್ರಿಯೆಯು ಅಕ್ಟೋಬರ್ ನಲ್ಲಿ ಅರಿಜೋನಾದ ಮೋರಿಸ್ ಏರ್ ನ್ಯಾಷನಲ್ ಗಾರ್ಡ್ ಬೇಸ್ನಲ್ಲಿ ಪ್ರಾರಂಭವಾಗಲಿದೆ ಎಂದು ರೈಡರ್ ಹೇಳಿದರು.
ಯುಎಸ್ ನೀಡಲಿರುವ ತರಬೇತಿಯು ಮೂಲಭೂತ ಫೈಟರ್ ಪೈಲಟ್ ತರಬೇತಿಯಾಗಿರುತ್ತದೆ ಎಂದು ಅವರು ಹೇಳಿದರು. ಉಕ್ರೇನಿಯನ್ ಪೈಲಟ್ಗಳ ಪಠ್ಯಕ್ರಮವು ಅವರ ಅನುಭವದ ಮಟ್ಟವನ್ನು ಅವಲಂಬಿಸಿರುತ್ತದೆ. ಇದರಲ್ಲಿ ಮೌಲ್ಯಮಾಪನವು ತರಬೇತಿ ಕಾರ್ಯಕ್ರಮದ ಭಾಗವಾಗಿದೆ ಎಂದು ವರದಿಗಳು ತಿಳಿಸಿವೆ.
ತರಬೇತಿಯ ಅವಧಿಯ ಬಗ್ಗೆ ಮಾತನಾಡಿದ ರೈಡರ್, ಹೆಚ್ಚಿನ ತರಬೇತಿ ಪಡೆಯದ ಪೈಲಟ್ಗಳಿಗೆ ಎಫ್ -16 ತರಬೇತಿ ಪೂರ್ಣಗೊಳಿಸಲು ಸಾಮಾನ್ಯವಾಗಿ ಎಂಟು ತಿಂಗಳು ತೆಗೆದುಕೊಳ್ಳುತ್ತದೆ ಮತ್ತು ಈಗಾಗಲೇ ಉತ್ತಮ ಪೈಲಟ್ ಆಗಿರುವವರು ಐದು ತಿಂಗಳೊಳಗೆ ತರಬೇತಿ ಮುಗಿಸಲಿದ್ದಾರೆ ಎಂದು ಹೇಳಿದರು. ಪ್ರಸ್ತುತ, ಯುರೋಪಿಯನ್ ದೇಶಗಳು ಉಕ್ರೇನಿಯನ್ ಪೈಲಟ್ಗಳಿಗೆ ಎಫ್ -16 ಮತ್ತು ಪಾಶ್ಚಿಮಾತ್ಯ ದೇಶಗಳು ತಯಾರಿಸಿದ ಇತರ ಸುಧಾರಿತ ಯುದ್ಧ ವಿಮಾನಗಳ ಬಗ್ಗೆ ತರಬೇತಿ ನೀಡುತ್ತಿವೆ. ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ಸ್ ಕೂಡ ಈಗ ಉಕ್ರೇನ್ ಪೈಲಟ್ಗಳಿಗೆ ತರಬೇತಿ ನೀಡಲು ಮುಂದಾಗಿವೆ. ಯುರೋಪ್ ಪೂರ್ಣ ಮಟ್ಟವನ್ನು ತಲುಪಿದರೆ ತನ್ನ ನೆಲದಲ್ಲಿ ತರಬೇತಿ ನೀಡಲು ಮುಂದಾಗುವುದಾಗಿ ಯುಎಸ್ ಸರ್ಕಾರ ಈ ಹಿಂದೆ ಹೇಳಿತ್ತು.
1976 ರಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿದ ಎಫ್ -16 ಫೈಟಿಂಗ್ ಫಾಲ್ಕನ್ ಸೂಪರ್ಸಾನಿಕ್ ಫೈಟರ್ ಜೆಟ್ ಆಗಿದ್ದು, ಇದನ್ನು 25 ದೇಶಗಳ ಮಿಲಿಟರಿಗಳು ಬಳಸುತ್ತಿವೆ. ಗಾಳಿಯಿಂದ ಗಾಳಿಯಲ್ಲಿ ಮತ್ತು ಗಾಳಿಯಿಂದ ನೆಲಕ್ಕೆ ದಾಳಿ ಮಾಡಲು ಇವನ್ನು ಬಳಸಲಾಗುತ್ತದೆ. ಅಫ್ಘಾನಿಸ್ತಾನ, ಇರಾಕ್, ಕೊಸೊವೊ, ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ ನಡೆಸಿದ ಯುದ್ಧಗಳಲ್ಲಿ ಈ ವಿಮಾನಗಳನ್ನು ಪ್ರಮುಖವಾಗಿ ಬಳಸಲಾಗಿತ್ತು. ಎಫ್ -16 ಅನ್ನು ಅಮೆರಿಕದ ರಕ್ಷಣಾ ಗುತ್ತಿಗೆದಾರ ಲಾಕ್ಹೀಡ್ ಮಾರ್ಟಿನ್ ತಯಾರಿಸಿದೆ.
ಎಫ್ -16 ವಿಮಾನಗಳು ಹಗುರವಾಗಿದ್ದು, ಬಹುಮುಖಿ ಕಾರ್ಯಾಚರಣೆಗೆ ಸೂಕ್ತವಾಗಿವೆ. ಕೆಲ ಅಂದಾಜಿನ ಪ್ರಕಾರ ಮಾದರಿಯನ್ನು ಅವಲಂಬಿಸಿ ಇವುಗಳ ಬೆಲೆ $ 63 ಮಿಲಿಯನ್ ವರೆಗೆ ಇದೆ. ಯು.ಎಸ್. ವಾಯುಪಡೆ ಮತ್ತು ನೌಕಾಪಡೆ ಸೇರಿದಂತೆ ವಿಶ್ವಾದ್ಯಂತ ಸುಮಾರು 3,000 ಎಫ್ -16ಗಳು ಮಿಲಿಟರಿಗಳಲ್ಲಿ ಸಕ್ರಿಯವಾಗಿವೆ.
ಇದನ್ನೂ ಓದಿ : ಸುಡಾನ್ ಸಂಘರ್ಷ: 20 ಲಕ್ಷ ಮಕ್ಕಳು ಸ್ಥಳಾಂತರ, ಆಹಾರ ಕ್ಷಾಮ ಹೆಚ್ಚಳ