ಟೆಲ್ ಅವೀವ್ (ಇಸ್ರೇಲ್) : ಅಕ್ಟೋಬರ್ 7 ರಂದು ಇಸ್ರೇಲ್ - ಹಮಾಸ್ ಸಂಘರ್ಷ ಭುಗಿಲೆದ್ದ ನಂತರ ಎರಡನೇ ಬಾರಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಸೋಮವಾರ ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ನ ಯುದ್ಧ ನಿರ್ವಹಣಾ ಕ್ಯಾಬಿನೆಟ್ ಸಚಿವರನ್ನು ಬ್ಲಿಂಕೆನ್ ಭೇಟಿ ಮಾಡಲಿದ್ದಾರೆ.
ಇಸ್ರೇಲ್ನ ರಕ್ಷಣೆಯನ್ನು ಬಲಪಡಿಸಲು ಮತ್ತು ಯುದ್ಧ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಪ್ರಯತ್ನಿಸುತ್ತಿರುವ ಬೈಡನ್ ಆಡಳಿತದ ಬೆಂಬಲದ ಭಾಗವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಉನ್ನತ ರಾಜತಾಂತ್ರಿಕ ಬ್ಲಿಂಕೆನ್ ವಾರ ಇಸ್ರೇಲ್ಗೆ ಬಂದಿದ್ದರು. ಯುದ್ಧ ಪೀಡಿತ ರಾಷ್ಟ್ರಕ್ಕೆ ಭೇಟಿ ನೀಡಿದ ಮೊದಲ ಹಿರಿಯ ಅಮೆರಿಕ ಆಡಳಿತದ ಅಧಿಕಾರಿಯಾಗಿದ್ದಾರೆ ಬ್ಲಿಂಕೆನ್.
ಇಸ್ರೇಲ್ ಭೇಟಿಗೂ ಮುನ್ನ ಎಕ್ಸ್ನಲ್ಲಿ ಮೆಸೇಜ್ ಪೋಸ್ಟ್ ಮಾಡಿದ್ದ ಬ್ಲಿಂಕೆನ್, "ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ನಾವು ಜೊತೆಗಿರುತ್ತೇವೆ. ಇದರ ಜೊತೆಗೆ ಗಾಜಾದ ಜನತೆಗೆ ಹಾನಿಯಾಗದಂತೆ ಅವರನ್ನು ರಕ್ಷಿಸಲು ಮತ್ತು ಅವರಿಗೆ ಅಗತ್ಯವಿರುವ ಆಹಾರ, ನೀರು, ಔಷಧಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ." ಎಂದು ಅವರು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಗಾಜಾ ಮತ್ತು ಈಜಿಪ್ಟ್ ನಡುವಿನ ರಾಫಾ ಕ್ರಾಸಿಂಗ್ ಮುಕ್ತವಾಗಿರುತ್ತದೆ ಮತ್ತು ನೆರವು ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸಲು ಅಮೆರಿಕವು ವಿಶ್ವಸಂಸ್ಥೆ, ಈಜಿಪ್ಟ್, ಇಸ್ರೇಲ್ ಮತ್ತು ಇತರರೊಂದಿಗೆ ಕೆಲಸ ಮಾಡುತ್ತಿದೆ ಎಂದು ಬ್ಲಿಂಕೆನ್ ಭಾನುವಾರ ಭರವಸೆ ನೀಡಿದ್ದರು.
ಗಾಜಾ ಮತ್ತು ಈಜಿಪ್ಟ್ ನಡುವಿನ ರಾಫಾ ಕ್ರಾಸಿಂಗ್ ಕಳೆದ ವಾರದಿಂದ ಮುಚ್ಚಲ್ಪಟ್ಟಿದೆ. ಇದರ ಪರಿಣಾಮವಾಗಿ ಹಮಾಸ್ ನಿಯಂತ್ರಿತ ಪ್ರದೇಶವು ನೀರು, ವಿದ್ಯುತ್, ಆಹಾರ, ಇಂಧನ ಮತ್ತು ಔಷಧಗಳ ಕೊರತೆ ಎದುರಿಸುತ್ತಿದ್ದು, ಮಾನವೀಯ ಬಿಕ್ಕಟ್ಟು ಎದುರಾಗಿದೆ. ಏತನ್ಮಧ್ಯೆ ಹಮಾಸ್ ನಿಯಂತ್ರಿತ ಪ್ರದೇಶಕ್ಕೆ ಸಹಾಯ ಸಾಮಗ್ರಿಗಳನ್ನು ಪೂರೈಸಲು ಸಾಧ್ಯವಾಗುವಂತೆ ರಾಫಾ ಗಡಿ ದಾಟುವಿಕೆಗಾಗಿ ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂಬ ವರದಿಗಳನ್ನು ಇಸ್ರೇಲ್ ಸಾರಾಸಗಟಾಗಿ ತಳ್ಳಿ ಹಾಕಿದೆ.
" ಈ ಸಮಯದಲ್ಲಿ ಗಾಜಾ ಪಟ್ಟಿಗೆ ಮಾನವೀಯ ನೆರವು ನೀಡಲು ಮತ್ತು ವಿದೇಶಿಯರ ನಿರ್ಗಮನಕ್ಕಾಗಿ ಕದನ ವಿರಾಮಕ್ಕೆ ಒಪ್ಪಿಲ್ಲ" ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಈಜಿಪ್ಟ್ ಮತ್ತು ಅಮೆರಿಕದೊಂದಿಗೆ ನಡೆದ ಮಾತುಕತೆಯ ಪ್ರಕಾರ ಬೆಳಗ್ಗೆ 9 ರಿಂದ ಗುಂಡಿನ ದಾಳಿಯನ್ನು ನಿಲ್ಲಿಸಲು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಈ ಮುನ್ನ ವರದಿಗಳು ತಿಳಿಸಿದ್ದವು. ರಾಫಾ ಗಡಿಯ ವಿಷಯದಲ್ಲಿ ಕದನ ವಿರಾಮದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹಮಾಸ್ ಹೇಳಿದೆ.
ಇದನ್ನೂ ಓದಿ : ನಾಸಾ ರೋವರ್ ಚಾಲೆಂಜ್ಗೆ ಅರ್ಹತೆ ಪಡೆದ ಭಾರತದ 7 ತಂಡಗಳು