ಹಿರೋಷಿಮಾ (ಜಪಾನ್) : ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಾಷೆಯ ದಾಟಿಯಲ್ಲಿ ಆಟೋಗ್ರಾಫ್ ಕೇಳಿದ್ದಾರೆ. ಮೋದಿಯವರು ಹೆಚ್ಚಿನ ಜನಸಂದಣಿಯನ್ನು ಸೂಕ್ತವಾಗಿ ನಿರ್ವಹಿಸುವ ಬಗೆ ಕುರಿತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮೆಚ್ಚುಗೆ ವ್ಯಕ್ತಪಡಿಸಿದ ಬಳಿಕ ಬೈಡನ್, ನಿಮ್ಮ ಆಟೋಗ್ರಾಫ್ ಕೊಡಿ ಎಂದು ಹಾಸ್ಯ ಮಾಡಿದರೆಂದು ಮೂಲಗಳು ತಿಳಿಸಿವೆ.
ವಾಷಿಂಗ್ಟನ್ ಡಿಸಿಗೆ ಮುಂದಿನ ತಿಂಗಳು ಮೋದಿ ಭೇಟಿ ನೀಡಲಿದ್ದಾರೆ. ನಿನ್ನೆ ನಡೆದ ಜಿ7 ಮತ್ತು ಕ್ವಾಡ್ ಸಭೆಯ ಸಂದರ್ಭದಲ್ಲಿ ಜೋ ಬೈಡನ್ ಅವರು ಪಿಎಂ ಮೋದಿ ಬಳಿ ಬಂದು ನಿಮ್ಮ ಕಾರ್ಯಕ್ರಮಕ್ಕೆ ಹಾಜರಾಗಲು ಜನರಿಂದ ಹೆಚ್ಚಿನ ಬೇಡಿಕೆ ಕೇಳಿ ಬರುತ್ತಿದ್ದು, ಮನವಿಗಳ ಮಹಾಪೂರವೇ ಹರಿದು ಬರುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲ್ಲೇ ಉಪಸ್ಥಿತರಿದ್ದ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಪ್ರತಿಕ್ರಿಯಿಸಿ, ಸಿಡ್ನಿಯಲ್ಲಿ ನಡೆಯಲಿರುವ ಸಮುದಾಯ ಸ್ವಾಗತ ಕಾರ್ಯಕ್ರಮದ ಸ್ಥಳವು 20,000 ಜನರ ಸಾಮರ್ಥ್ಯ ಹೊಂದಿದೆ. ಆದರೂ ಸಹ ಮೋದಿ ಕಾರ್ಯಕ್ರಮಕ್ಕೆ ಬರುತ್ತಿರುವ ವಿನಂತಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದರು.
ಆ ನಂತರ, ಪಿಎಂ ಅಲ್ಬನೀಸ್ ಅವರು ತಾವು ಭಾರತಕ್ಕೆ ಭೇಟಿ ನೀಡಿದ ವೇಳೆ ಕ್ರೀಡಾಂಗಣದಲ್ಲಿ 90,000 ಕ್ಕೂ ಹೆಚ್ಚು ಜನರನ್ನು ಮೋದಿ ಸ್ವಾಗತಿಸಿದ ಬಗೆಯನ್ನು ನೆನಪಿಸಿಕೊಂಡರು. ಇದಕ್ಕೆ ಪಕ್ಕದಲ್ಲೇ ಇದ್ದ ಜೋ ಬೈಡನ್, "ನಾನು ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕು" ಎಂದು ಪ್ರಧಾನಿ ಮೋದಿಯವರಿಗೆ ಹಾಸ್ಯವಾಗಿ ನುಡಿದರು.
ಇದನ್ನೂ ಓದಿ : ಭಾರತ-ಬ್ರಿಟನ್ ಆಲಿಂಗನ : ರಿಷಿ ಸುನಕ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ
ಹಿರೋಷಿಮಾದಲ್ಲಿ ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಜಪಾನ್‌ಗೆ ತೆರಳಿದ್ದರು. ಇಂದು ಜಿ7 ಶೃಂಗಸಭೆ ಮುಕ್ತಾಯವಾಗಲಿದೆ. ನಿನ್ನೆ ಹಿರೋಷಿಮಾದಲ್ಲಿ ಮಾತನಾಡಿದ್ದ ಮೋದಿ, 2024 ರಲ್ಲಿ ಮುಂದಿನ ಕ್ವಾಡ್ (ಚತುರ್ಭುಜ ಭದ್ರತಾ ಸಂವಾದ ಸಭೆ)ಯನ್ನು ಆಯೋಜಿಸಲು ಭಾರತ ಸಿದ್ಧವಾಗಿದೆ. ಭಾರತದಲ್ಲಿ ಕ್ವಾಡ್ ಶೃಂಗಸಭೆ ಆಯೋಜಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿ7 ಶೃಂಗಸಭೆ ಸಂದರ್ಭದಲ್ಲಿ ಕ್ವಾಡ್ ಸಭೆಯಲ್ಲಿಯೂ ಭಾಗವಹಿಸಲು ಒಪ್ಪಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಧನ್ಯವಾದ ಹೇಳಿದರು.
ಇದನ್ನೂ ಓದಿ : ಮೋದಿ, ಜಿ7 ನಾಯಕರಿಂದ ಹಿರೋಷಿಮಾ ಶಾಂತಿ ಸ್ಮಾರಕಕ್ಕೆ ಪುಷ್ಪ ನಮನ - ವಿಡಿಯೋ
ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕ್ವಾಡ್ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಭಾರತ, ಯುಎಸ್, ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿ ಚತುರ್ಭುಜ ಗುಂಪು ರಚಿಸಿಕೊಂಡಿವೆ.
ಇದನ್ನೂ ಓದಿ : ಮೂರು ದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿಗೆ ವಿಶೇಷ ಗೌರವ : ಏನೇನು ಗೊತ್ತಾ?