ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಅಮೆರಿಕದಲ್ಲಿ ಸಾಫ್ಟ್ವೇರ್ಗೆ ಮೊದಲ ಬಾರಿಗೆ ಪೇಟೆಂಟ್ ಪಡೆದ ಹಾಗೂ 'ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಪಿತಾಮಹ' ಎಂದೇ ಪ್ರಸಿದ್ಧಿ ಪಡೆದಿದ್ದ ಮಾರ್ಟಿನ್ ಗೊಯೆಟ್ಜ್ ನಿಧನರಾದರು. ಇವರಿಗೆ 93 ವರ್ಷ ವಯಸ್ಸಾಗಿತ್ತು.
1963ರಲ್ಲಿ ಗೊಯೆಟ್ಜ್ ತನ್ನ ಪಾಲುದಾರರೊಂದಿಗೆ ಸೇರಿ ಸಾಫ್ಟ್‌ವೇರ್ ಸಂಸ್ಥೆ ಸ್ಥಾಪಿಸಿದರು. ಈ ಸಂಸ್ಥೆಗೆ ಅಪ್ಲೈಡ್ ಡಾಟಾ ರಿಸರ್ಚ್ ಎಂದು ಹೆಸರಿಟ್ಟಿದ್ದರು. ಇಲ್ಲಿ ಗೊಯೆಟ್ಜ್ ದತ್ತಾಂಶಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದರು. ಬಳಿಕ ಈ ಸಾಫ್ಟ್ವೇರ್ಗಾಗಿ ಅವರು ಪೇಟೆಂಟ್ ಪಡೆದರು.
ಗೊಯೆಟ್ಜ್ ಸತತ ಮೂರು ವರ್ಷಗಳ ಹೋರಾಟ ನಡೆಸಿ ಬಳಿಕ ತಮ್ಮ ಸಾಫ್ಟ್ವೇರ್ಗೆ ಪೇಟೆಂಟ್ ದಕ್ಕಿಸಿಕೊಂಡಿದ್ದರು. ಇದಕ್ಕೂ ಮೊದಲು ಯುಎಸ್ ಪೇಟೆಂಟ್ ಆಫೀಸ್ನಲ್ಲಿ ಪೇಟೆಂಟ್ ನೀಡುವಂತೆ ಗೊಯೆಟ್ಜ್ ಸತತ ಹೋರಾಟ ಮಾಡಿದ್ದರು. ಅಲ್ಲಿಯವರೆಗೆ ಸಾಫ್ಟ್‌ವೇರ್ ಅನ್ನು ಪೇಟೆಂಟ್ ನೀಡುವ ವಸ್ತುವನ್ನಾಗಿ ಪರಿಗಣಿಸಲಾಗಿರಲಿಲ್ಲ. ಗೊಯೆಟ್ಜ್ ತನ್ನ ಸಾಫ್ಟ್ವೇರನ್ನು ಪೇಟೆಂಟ್ ಮಾಡಿದ ಬಳಿಕ ಐಬಿಎಂ ಸಂಸ್ಥೆಗೆ ನಕಲು ಮಾಡಲು ಮತ್ತು ಬಳಕೆ ಮಾಡಲು ಸಾಧ್ಯವಾಗಲಿಲ್ಲ.
2002ರಲ್ಲಿ ಮಿನ್ನೆಸೋಟ ವಿಶ್ವವಿದ್ಯಾಲಯದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗೊಯೆಟ್ಜ್, 1968ರ ಹೊತ್ತಿಗೆ ನಾನು ಮೂರು ವರ್ಷಗಳ ಕಾಲ ಹಕ್ಕು ಸ್ವಾಮ್ಯ (ಪೇಟೆಂಟ್) ಹೋರಾಟದಲ್ಲಿ ತೊಡಗಿದ್ದೆ. ನನ್ನ ಹೋರಾಟ ಪೇಟೆಂಟ್ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದು ಅಂದುಕೊಂಡಿದ್ದೆ. ಸಾಫ್ಟ್‌ವೇರ್ ಪೇಟೆಂಟ್ ಪಡೆಯುವಲ್ಲಿ ನನ್ನ ಹೋರಾಟ ಇಂದು ನನ್ನನ್ನು ಸಾಫ್ಟ್‌ವೇರ್ ಚಾಂಪಿಯನ್ ಮಾಡಿದೆ ಎಂದಿದ್ದರು.
ಇಂದಿನ ದಿನಮಾನದಲ್ಲಿ ಯಾರೋ ಒಬ್ಬರು ತಯಾರು ಮಾಡಿದ ಅಪ್ಲಿಕೇಷನ್ಗಳು, ಸಾಫ್ಟ್ವೇರ್ಗಳನ್ನು ನಾವು ಬಳಕೆ ಮಾಡುತ್ತಿದ್ದೇವೆ. ಇದು ಗೊಯೆಟ್ಜ್ ಅವರ ದೂರದೃಷ್ಟಿ, ವೈಜ್ಞಾನಿಕ ಆವಿಷ್ಕಾರ, ಕಠಿಣ ಪರಿಶ್ರಮಕ್ಕೆ ಸಿಕ್ಕ ಮನ್ನಣೆ ಎಂದು ಕ್ಯಾಲಿಫೋರ್ನಿಯಾದ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಬಿನ್ ಫೆಲ್ಡ್ಮನ್ ಅಭಿಪ್ರಾಯಪಟ್ಟಿದ್ದಾರೆ.
1969ರಲ್ಲಿ ಅಪ್ಲೈಡ್ ಡಾಟಾ ರಿಸರ್ಚ್ ಸಂಸ್ಥೆಯು ಐಬಿಎಂ ವಿರುದ್ಧ ಪ್ರಕರಣ ದಾಖಲಿಸಿತ್ತು. ಐಬಿಎಂ ಸಂಸ್ಥೆಯು ಉಪಕರಣಗಳು ಮತ್ತು ಸಾಫ್ಟ್ವೇರ್ಗಳಿಗೆ ಕಾನೂನುಬಾಹಿರವಾಗಿ ಒಂದೇ ಬೆಲೆ ನಿಗದಿ ಪಡಿಸಿದೆ ಎಂದು ಆರೋಪಿಸಲಾಗಿತ್ತು. ಇವುಗಳನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಲಾಗಿತ್ತು. ಬಳಿಕ ಐಬಿಎಂ ಉಪಕರಣ ಮತ್ತು ಸಾಫ್ಟ್ವೇರ್ಗಳನ್ನು ಬಿಡುಗಡೆಗೊಳಿಸಿತ್ತು. 1970ರಲ್ಲಿ ಈ ಪ್ರಕರಣವು ಸುಖಾಂತ್ಯಗೊಂಡಿತ್ತು.
1985ರಲ್ಲಿ ಟೆಲಿ ಕಮ್ಯುನಿಕೇಷನ್ ಕಂಪನಿ ಅಮೆರಿಕಟೆಕ್ ಅಪ್ಲೈಡ್ ಡೇಟಾ ಸಂಸ್ಥೆಯನ್ನು 215 ಮಿಲಿಯನ್ ಡಾಲರ್ಗೆ ಖರೀದಿಸಿತು. ಗೊಯೆಟ್ಜ್ ಕಂಪನಿಯ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿಯಾದರು. 1988ರಲ್ಲಿ ಸಾಫ್ಟ್‌ವೇರ್ ಸಂಸ್ಥೆ ಸಿಲೋಜಿಯ ಮುಖ್ಯ ಕಾರ್ಯನಿರ್ವಾಹಕರಾದರು. ಬಳಿಕ ಇವರು ಹಲವು ಸಾಫ್ಟ್‌ವೇರ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಇವರ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಇವರ ಸಾಧನೆಗೆ ಹಲವು ಗೌರವಗಳು ಸಂದಿದ್ದು, ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಪಿತಾಮಹ ಎಂದು ಪ್ರಸಿದ್ಧಿ ಪಡೆದಿದ್ದರು.
ಇದನ್ನೂ ಓದಿ: ಡೆಟ್ರಾಯಿಟ್ ಸಿನಗಾನ್ ಅಧ್ಯಕ್ಷೆಗೆ ಇರಿದು ಕೊಲೆ.. ಮನೆಯ ಹೊರಗೆ ಸಮಂತಾ ವೋಲ್ ಶವವಾಗಿ ಪತ್ತೆ