ವಾಷಿಂಗ್ಟನ್: ಪೂರ್ವ ಸಿರಿಯಾದಲ್ಲಿ ಇರಾನ್ ಬೆಂಬಲಿತ ಗುಂಪುಗಳಿಗೆ ಸಂಬಂಧಿಸಿದ ಎರಡು ಸ್ಥಳಗಳ ಮೇಲೆ ಯುಎಸ್ ಮಿಲಿಟರಿ ವೈಮಾನಿಕ ದಾಳಿ ನಡೆಸಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಈ ದಾಳಿಗಳನ್ನು ನಡೆಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ನಿರ್ದೇಶಿಸಿದ್ದಾರೆ. ಇದರಿಂದ ಕ್ರಮವಾಗಿ ಅಬುಕಾಮಾ ಮತ್ತು ಮಾಯಾದಿನ್ ನಗರಗಳ ಬಳಿಯಿರುವ ತರಬೇತಿ ಸ್ಥಳ ಮತ್ತು ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ತಿಳಿಸಿದ್ದಾರೆ.
ಪೆಂಟಗನ್ ಮತ್ತು ಯುಎಸ್ ಅಧಿಕಾರಿಗಳ ಪ್ರಕಾರ, ಇರಾಕ್ ಮತ್ತು ಸಿರಿಯಾದಲ್ಲಿನ ಯುಎಸ್ನ ಮಿಲಿಟರಿ ನೆಲೆಗಳ ಮೇಲೆ ಹೆಚ್ಚುತ್ತಿರುವ ದಾಳಿಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ. ಭಯೋತ್ಪಾದಕರ ವಿರುದ್ಧ ಕೇವಲ ಎರಡು ವಾರಗಳಲ್ಲಿ ಯುಎಸ್ ಮೂರನೇ ಬಾರಿ ದಾಳಿ ಮಾಡಿದೆ. ಇದರಿಂದ ಅಬುಕಾಮಾ ಮತ್ತು ಮಾಯಾದಿನ್ ಬಳಿಯ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಈ ಪ್ರದೇಶಗಳನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಾಗೂ ಇರಾನ್ ಬೆಂಬಲಿತ ಭಯೋತ್ಪಾದಕರು ಬಳಸಿದ್ದರು. ಅಮೆರಿಕ ತನ್ನ ಸಿಬ್ಬಂದಿ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ಸ್ಪಷ್ಟಪಡಿಸಲು ಅಮೆರಿಕ ಅಧ್ಯಕ್ಷರು ಈ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದು ಆಸ್ಟಿನ್ ಮಾಹಿತಿ ನೀಡಿದ್ದಾರೆ.
ಯುಎಸ್ ಸಿಬ್ಬಂದಿ ನೆಲೆಗಳ ಮೇಲೆ ಸುಮಾರು 50 ದಾಳಿ: ಇರಾಕ್‌ನಲ್ಲಿ ಭಯೋತ್ಪಾದಕ ಗುಂಪುಗಳು ಅಕ್ಟೋಬರ್ 17ರಿಂದ ಇರಾಕ್ ಮತ್ತು ಸಿರಿಯಾದಲ್ಲಿನ ಅಮೆರಿಕನ್ ಸಿಬ್ಬಂದಿ ನೆಲೆಗಳ ಮೇಲೆ ಸುಮಾರು 50 ದಾಳಿಗಳನ್ನು ನಡೆಸಿತ್ತು. ಪೆಂಟಗನ್ ಪ್ರಕಾರ, ಸಿರಿಯಾ ಮತ್ತು ಇರಾಕ್‌ನಲ್ಲಿ ನಡೆದ ದಾಳಿಯಲ್ಲಿ ಸುಮಾರು 56 ಅಮೆರಿಕನ್ ಸಿಬ್ಬಂದಿ ಗಾಯಗೊಂಡಿದ್ದರು.
ಅದೇ ದಿನ ಗಾಜಾ ಆಸ್ಪತ್ರೆಯಲ್ಲಿ ಪ್ರಬಲ ಸ್ಫೋಟ ಸಂಭವಿಸಿತ್ತು. ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ನಡೆದ ಸ್ಫೋಟದಲ್ಲಿ ನೂರಾರು ಜನರು ಸಾವನ್ನಪ್ಪಿದ್ದರು. ಅನೇಕ ಮುಸ್ಲಿಂ ದೇಶಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಅಕ್ಟೋಬರ್ 7 ರಂದು ಹಮಾಸ್ನವರು ದಕ್ಷಿಣ ಇಸ್ರೇಲ್‌ನಲ್ಲಿ ಭೀಕರ ದಾಳಿಗಳನ್ನು ನಡೆಸಿದ್ದರು. ಪ್ರತಿಯಾಗಿ, ಇಸ್ರೇಲಿ ಸೇನೆಯಿಂದ ಪ್ರತೀಕಾರದ ದಾಳಿಗಳು ಇನ್ನೂ ಮುಂದುವರೆದಿವೆ. ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಅನ್ನು ಬೆಂಬಲಿಸಿದ್ದಕ್ಕಾಗಿ ಹಲವಾರು ಗುಂಪುಗಳು ಯುಎಸ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿವೆ.
ಇದನ್ನೂ ಓದಿ: ಉಕ್ರೇನ್ ಮೇಲೆ ಮತ್ತೆ ದಾಳಿ ತೀವ್ರಗೊಳಿಸಿದ ರಷ್ಯಾ; ಬಖ್ಮುತ್ ನಗರ ವಶಕ್ಕೆ ಸಂಘರ್ಷ