ವಾಷಿಂಗ್ಟನ್: ರಷ್ಯಾದ ಗಣ್ಯರನ್ನು ಗುರಿಯಾಗಿಸಿಕೊಂಡು ಅಮೆರಿಕ ಹೊಸ ನಿರ್ಬಂಧಗಳನ್ನು ಹೇರಿದೆ. ಹೊಸ ನಿರ್ಬಂಧಗಳ ಅಡಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆಳತಿಯರು ಈ ಪಟ್ಟಿಯಲ್ಲಿ ಸೇರಿಸಿರುವುದು ಈಗ ಸದ್ದು ಮಾಡುತ್ತಿದೆ. ಬೈಡನ್ ಆಡಳಿತವು ಮಾಜಿ ಒಲಿಂಪಿಕ್ ಜಿಮ್ನಾಸ್ಟ್ ಮತ್ತು ಸ್ಟೇಟ್ ಡುಮಾದ ಮಾಜಿ ಸದಸ್ಯೆ (ರಷ್ಯಾದ ಸಂಸತ್ತಿನ ಕೆಳಮನೆ) ಅಲೀನಾ ಕಬೇವಾ ಅವರ ವೀಸಾಗಳನ್ನು ಸ್ಥಗಿತಗೊಳಿಸಿದೆ. ಅಷ್ಟೇ ಅಲ್ಲ ಅವರ ಆಸ್ತಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ಅಮೆರಿಕ ಖಜಾನೆ ಇಲಾಖೆ ಹೇಳಿದೆ.
ಕಬೇವಾ ಅವರು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಬೆಂಬಲಿಸುವ ರಷ್ಯಾದ ಮಾಧ್ಯಮ ಕಂಪನಿಯ ಮುಖ್ಯಸ್ಥರಾಗಿದ್ದಾರೆ ಎಂಬುದು ಇಲ್ಲಿ ವಿಶೇಷ. ಪುಟಿನ್ ಟೀಕಾಕಾರ ಹಾಗೂ ವಿಮರ್ಶಕ ಅಲೆಕ್ಸಿ ನವಲ್ನಿ, ಕಬೇವಾ ವಿರುದ್ಧ ನಿರ್ಬಂಧಗಳನ್ನು ಹೇರಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದರು. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ಬಗ್ಗೆ ಪಾಶ್ಚಿಮಾತ್ಯ ಟೀಕೆಗಳನ್ನೇ ಪ್ರಚಾರ ಅಭಿಯಾನವಾಗಿ ಬಿಂಬಿಸುವಲ್ಲಿ ಕಬೇವಾ ಯಶಸ್ವಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಬೈಡನ್ ಆಡಳಿತ ಕಬೇವಾ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಇನ್ನು ಕಳೆದ ಮೇ ತಿಂಗಳಲ್ಲೇ ಕಬೇವಾ ವಿರುದ್ಧ ಬ್ರಿಟನ್ ನಿರ್ಬಂಧಗಳನ್ನು ಅನುಮೋದಿಸಿತ್ತು. ಅದೇ ಸಮಯದಲ್ಲಿ, ಯುರೋಪಿಯನ್ ಒಕ್ಕೂಟವು ಕಳೆದ ಜೂನ್‌ನಲ್ಲಿ ಅವರ ಮೇಲೆ ಪ್ರಯಾಣ ಮತ್ತು ಆಸ್ತಿ ಮೇಲಿನ ನಿಷೇಧವನ್ನು ಘೋಷಿಸಿತ್ತು.
ಇನ್ನು ವಿಟೆನ್‌ಹರ್ಸ್ಟ್ ಎಸ್ಟೇಟ್ ಹೊಂದಿರುವ ಆಂಡ್ರೆ ಗ್ರಿಗೊರಿವಿಚ್ ಗುರೆವ್ ಮೇಲೆ ಅಮೆರಿಕ ಖಜಾನೆ ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಿದೆ. 25 ಕೋಣೆಗಳ ವಿಟ್ಟನ್‌ಹರ್ಸ್ಟ್ ಎಸ್ಟೇಟ್ ಬಕಿಂಗ್‌ಹ್ಯಾಮ್ ಅರಮನೆಯ ನಂತರ ಲಂಡನ್‌ನಲ್ಲಿ ಎರಡನೇ ಅತಿದೊಡ್ಡ ಅರಮನೆಯಾಗಿದೆ. ಗುರೆವ್ ಅವರ 120 ಮಿಲಿಯನ್ ಡಾಲರ್ ಮೌಲ್ಯದ ವಿಹಾರ ನೌಕೆ ಕೂಡ ನಿಷೇಧದ ವ್ಯಾಪ್ತಿಯಲ್ಲಿದೆ.
ಕಳೆದ ಏಪ್ರಿಲ್‌ನಲ್ಲಿ ಪುಟಿನ್ ಅವರ ಪುತ್ರಿಯರಾದ ಕತ್ರಿನಾ ವ್ಲಾಡಿಮಿರೊವ್ನಾ ಟಿಖೋನೊವಾ ಮತ್ತು ಮರಿಯಾ ವ್ಲಾಡಿಮಿರೊವ್ನಾ ವೊರೊಂಟ್ಸೊವಾ ಅವರ ಮೇಲೆ ಅಮೆರಿಕ ನಿಷೇಧವನ್ನು ಘೋಷಿಸಿತ್ತು. ಈಗ ಅವರ ಪ್ರೇಯಿಸಿ ಮೇಲೆಯೂ ನಿರ್ಬಂಧವನ್ನು ಘೋಷಿಸಿದೆ.
ಇದಲ್ಲದೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಮೂರು ಒಲಿಗಾರ್ಚ್‌ಗಳ ಮೇಲೆ ನಿರ್ಬಂಧಗಳನ್ನು ಘೋಷಿಸಿದ್ದಾರೆ. 31 ವಿದೇಶಿ ಸರ್ಕಾರಿ ಅಧಿಕಾರಿಗಳು ಉಕ್ರೇನ್‌ನ ಕ್ರಿಮಿಯಾ ಪ್ರದೇಶವನ್ನು ರಷ್ಯಾ ಉದ್ದೇಶಪೂರ್ವಕ ಸ್ವಾಧೀನಪಡಿಸುವಿಕೆ ಬೆಂಬಲಿಸಲು ಕಾರ್ಯನಿರ್ವಹಿಸಿದ್ದಾರೆ ಮತ್ತು ಆ ಮೂಲಕ ಉಕ್ರೇನ್‌ನ ಸಾರ್ವಭೌಮತೆಗೆ ಬೆದರಿಕೆ ಅಥವಾ ಉಲ್ಲಂಘಿಸಿದ್ದಾರೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಇದನ್ನು ಓದಿ: ಪೆಲೋಸಿ ತೈವಾನ್ ಪ್ರವಾಸ ಮತ್ತು ಚೀನಾ ರಣ ನೀತಿ... ಏನಿದು ವಿವಾದ?