ವಿಶ್ವಸಂಸ್ಥೆ: ಇಸ್ರೇಲ್ ನಡೆಸುತ್ತಿರುವ ಯುದ್ಧವು ಲಕ್ಷಾಂತರ ಪ್ಯಾಲೆಸ್ಟೈನಿಯನ್ನರನ್ನು ಸಾವು ಬದುಕಿನ ಮಧ್ಯೆ ನರಳುವಂತೆ ಮಾಡಿದೆ. ಹೀಗಾಗಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು. ಆದಷ್ಟು ಶೀಘ್ರದಲ್ಲಿ ಅಲ್ಲಿನ ಲಕ್ಷಾಂತರ ಜನರಿಗೆ ಮಾನವೀಯ ನೆರವು ಒದಗಿಸಬೇಕಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಸೋಮವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಲಕ್ಷಾಂತರ ಪ್ಯಾಲೆಸ್ಟೈನಿಯನ್ನರು ಯುದ್ಧ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಇಸ್ರೇಲ್ ಬಲವಂತವಾಗಿ ಸ್ಥಳಾಂತರ ಮಾಡಿಸಿದೆ. ಇದರಿಂದ ಅಗತ್ಯ ಸೌಲಭ್ಯಗಳ ಕೊರತೆಯಿಂದ ಜನರು ನಲುಗಿದ್ದಾರೆ. ತಕ್ಷಣವೇ ಇಸ್ರೇಲ್ ಕದನವಿರಾಮ ಘೋಷಿಸಬೇಕು. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಜನರಿಗೆ ತಕ್ಷಣವೇ ವಿಶ್ವಸಮುದಾಯ ನೆರವು ನೀಡಬೇಕು ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್ ಹೇಳಿದೆ.
ಯುನಿಸೆಫ್ ಮುಖ್ಯಸ್ಥರಾದ ಲಜ್ಜರಿನಿ ಹೇಳುವಂತೆ, ಗಾಜಾದಲ್ಲಿ 23 ದಿನಗಳ ಯುದ್ಧದಲ್ಲಿ 8,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 66 ಪ್ರತಿಶತ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಇದು ಗಾಜಾದ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳಾಗಿವೆ. ಅದರಲ್ಲೂ 3,400 ಕ್ಕೂ ಹೆಚ್ಚು ಮಕ್ಕಳು ಇಸ್ರೇಲ್ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. 6,300 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರರ್ಥ ಗಾಜಾದಲ್ಲಿ ಪ್ರತಿದಿನ 420 ಕ್ಕೂ ಹೆಚ್ಚು ಮಕ್ಕಳು ಸಾಯುತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಇದು ನಿಜಕ್ಕೂ ಆತಂಕದ ವಿಚಾರವಾಗಿದೆ ಎಂದು ಹೇಳಿದರು. 2019 ರಿಂದ ವಿಶ್ವದ ಹಲವು ಪ್ರದೇಶಗಳಲ್ಲಿ ನಡೆಯುವ ಸಂಘರ್ಷಗಳಲ್ಲಿ ವಾರ್ಷಿಕವಾಗಿ ಸಾವಿಗೀಡಾದ ಮಕ್ಕಳ ಸಂಖ್ಯೆಯನ್ನು ಇದು ಮೀರಿಸುತ್ತದೆ ಎಂದು ಅವರು ತಿಳಿಸಿದರು.
ದಾಳಿಗೆ ಖಂಡನೆ, ನೆರವಿಗೆ ಒತ್ತಾಯ: ಇನ್ನು ತುರ್ತು ಸಭೆಯಲ್ಲಿ ಅನೇಕ ರಾಷ್ಟ್ರಗಳ ನಾಯಕರು ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಖಂಡಿಸಿದರು. ಉಗ್ರಗಾಮಿಗಳು ಗಾಜಾದಲ್ಲಿ ಒತ್ತೆಯಾಳಾಗಿಟ್ಟುಕೊಂಡ ಸುಮಾರು 230 ಜನರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇದರ ಜೊತೆಗೆ ಇಸ್ರೇಲ್ ದಾಳಿಯಿಂದಾಗಿ ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ಮೂಲಸೌಕರ್ಯಗಳೂ ಬಂದ್ ಆಗಿದ್ದು, ಜನರ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಮಾನವೀಯ ಕಾನೂನಿನಡಿ ಒದಗಿಸಬೇಕಿದೆ. ಗಾಜಾಕ್ಕೆ ಆಹಾರ, ನೀರು, ಇಂಧನ ಮತ್ತು ಔಷಧವನ್ನು ಕಡಿತಗೊಳಿಸಿದ್ದಕ್ಕಾಗಿ ಇಸ್ರೇಲ್ ನಿರ್ಧಾರವನ್ನು ಟೀಕಿಸಲಾಯಿತು.
ಈಚೆಗೆ ಈಜಿಪ್ಟ್‌ನಿಂದ ರಫಾ ಕ್ರಾಸಿಂಗ್ ಮೂಲಕ ಗಾಜಾಕ್ಕೆ ಒಂದಷ್ಟು ನೆರವು ಸಿಕ್ಕಿದೆ. ಆದರೆ, ಗಾಜಾದಲ್ಲಿ ಸಿಕ್ಕಿಬಿದ್ದಿರುವ 2 ಮಿಲಿಯನ್‌ಗಿಂತಲೂ ಹೆಚ್ಚು ಜನರ ಅಗತ್ಯಗಳಿಗೆ ಸಾಕಾಗದು. ಗಾಜಾದೊಳಕ್ಕೆ ನೆರವು ಹೋಗಲೂ ಇಸ್ರೇಲ್ ಬಿಡುತ್ತಿಲ್ಲ. ಮೂಲಭೂತ ಸೇವೆಗಳು ಗಣನೀಯವಾಗಿ ಕುಸಿಯುತ್ತಿವೆ. ಔಷಧಿ, ಆಹಾರ, ನೀರು ಮತ್ತು ಇಂಧನ ಖಾಲಿಯಾಗುತ್ತಿವೆ. ಇದು ಹೀಗೆಯೇ ಮುಂದುವರಿದಲ್ಲಿ ಶೀಘ್ರದಲ್ಲೇ ಭಾರೀ ಆರೋಗ್ಯ ಅಪಾಯವನ್ನು ತಂದೊಡ್ಡಲಿದೆ.
ಇದನ್ನೂ ಓದಿ: ನಿಲ್ಲದ ಇಸ್ರೇಲ್ ದಾಳಿ.. ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು: ನಿರಾಶ್ರಿತರಿಗೆ ನೆರವಿನ ಹಸ್ತ