ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಶಾಂತಿ ಮಾತುಕತೆ ಬಹುತೇಕ ಯಶಸ್ಸು ಕಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ಅಧಿಕೃತ ಟೆಲಿಗ್ರಾಮ್ ಚಾನೆಲ್ ಮೂಲಕ ತಿಳಿಸಿದ್ದಾರೆ. ಈ ಮೂಲಕ ಉಭಯ ನಾಯಕರು ಮುಂದಿನ ಸಂಧಾನ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಚರ್ಚೆಯ ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಮಿಲಿಟರಿ ಚಟುವಟಿಕೆಯನ್ನು ಕಡಿಮೆ ಮಾಡುವುದಾಗಿ ಮಾಸ್ಕೋ ಹೇಳಿದೆ. ಆ ಮೂಲಕ ಮಂಗಳವಾರ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಪುಟಿನ್- ಝಲೆನ್ಸ್ಕಿ ಮಾತುಕತೆ ಇದೀಗ ಸಾಧ್ಯ ಎನ್ನಲಾಗ್ತಿದೆ. ಉಕ್ರೇನ್ ಎಲ್ಲ ಅಪಾಯಗಳ ಬಗ್ಗೆ ತಿಳಿದಿದೆ. ಗಟ್ಟಿಯಾದ ಫಲಿತಾಂಶಗಳನ್ನು ಮಾತ್ರ ನಂಬುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಓದಿ: ಯಾವಾಗ ಮುಗಿಯುತ್ತೋ ಯುದ್ಧ.. ರಷ್ಯಾ ದಾಳಿಯಿಂದ ಉಕ್ರೇನ್ಗೆ ಬರೋಬ್ಬರಿ 1 ಲಕ್ಷ ಕೋಟಿ ರೂ. ನಷ್ಟ!
ಅರ್ಥಪೂರ್ಣ ಮಾತುಕತೆ- ರಷ್ಯಾ ಸ್ವಾಗತ: ಮಂಗಳವಾರ ನಡೆದ ಮಾತುಕತೆಗಳ ನಂತರ, ಉಕ್ರೇನಿಯನ್ ನಿಯೋಗದ ಸದಸ್ಯ ಡೇವಿಡ್ ಅರಾಖಮಿಯಾ, ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಭದ್ರತಾ ಖಾತರಿಗಳ ಕುರಿತು ಹೊಸ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಲು ಕೀವ್ ಪ್ರಸ್ತಾಪಿಸಿದೆ ಎಂದು ಹೇಳಿದರು. ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ಒಂದು ತಿಂಗಳ ನಂತರ ಉಕ್ರೇನ್ ಪ್ರತಿನಿಧಿಗಳೊಂದಿಗೆ ಇಸ್ತಾಂಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಅರ್ಥಪೂರ್ಣ ಪ್ರಗತಿ ಹೊಂದಿರುವುದನ್ನು ರಷ್ಯಾದ ಸಂಧಾನಕಾರರು ಸ್ವಾಗತಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ತಾಂಬುಲ್‌ನಲ್ಲಿ ಹಲವು ಗಂಟೆಗಳ ಕಾಲ ನಡೆದ ರಷ್ಯಾದ ಮುಖ್ಯ ಸಮಾಲೋಚಕ ವ್ಲಾಡಿಮಿರ್ ಮೆಡಿಸ್ಕಿ ಮಾತನಾಡಿ, ಈ ಸಭೆಯಲ್ಲಿ ಉಕ್ರೇನಿಯನ್ ಸಮಾಲೋಚಕರು ಎಲ್ಲ ಪ್ರಸ್ತಾಪಗಳನ್ನು ಮಂಡಿಸಿದ್ದಾರೆ. ಯುದ್ಧವನ್ನು ಅಂತ್ಯಗೊಳಿಸಲು ರಷ್ಯಾ ಮತ್ತು ಉಕ್ರೇನಿಯನ್ ವಿದೇಶಾಂಗ ಸಚಿವಾಲಯಗಳು ಒಪ್ಪಂದಕ್ಕೆ ಸಮ್ಮತಿಸಿದರೆ ಮಾತ್ರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಸೆಲೆನ್ಸ್ಕಿ ನಡುವೆ ಮತ್ತೊಂದು ಸುತ್ತಿನ ಸಂಧಾನ ನಡೆಸುವ ಸಾಧ್ಯತೆಯಿದೆ ಎಂದು ಮೆಡಿಸ್ಕಿ ಹೇಳಿದ್ದಾರೆ.
ಓದಿ: ಐಪಿಎಲ್ 2022: ಸನ್ ರೈಸರ್ಸ್ ವಿರುದ್ಧ ರಾಜಸ್ಥಾನಕ್ಕೆ 61ರನ್‌ಗಳ ಭರ್ಜರಿ ಗೆಲುವು
ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಮುಂದುವರಿದಿದ್ದು, ಈಗಾಗಲೇ ತಿಂಗಳ ಕಳೆದಿದೆ. ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸಾವಿರಾರೂ ಮಕ್ಕಳು ಅನಾಥರಾಗಿದ್ದು, ಒಂದೊತ್ತಿನ ಊಟಕ್ಕೂ ಪರದಾಡು ಸ್ಥಿತಿ ಬಂದೊದಗಿದೆ. ತಮ್ಮ ಸ್ವಂತ ಮನೆಗಳನ್ನು ಕಳೆದುಕೊಂಡು ಲಕ್ಷಾಂತರ ಜನರು ನಿರಾಶಿತರಾಗಿದ್ದಾರೆ. ಆದರೂ ಸಹಿತ ಎರಡು ದೇಶಗಳ ಮಧ್ಯೆ ಯುದ್ಧ ನಿಲ್ಲಿಸುವ ಗೋಜಿಗೆ ಹೋಗುತ್ತಿಲ್ಲ. ಕಳೆದ ದಿನ ನಡೆದ ಶಾಂತಿ ಮಾತುಕತೆಯಿಂದಾಗಿ ಉಕ್ರೇನ್ ಜನತೆಗೆ ಯುದ್ಧ ನಿಲ್ಲುವ ಭರವಸೆ ಮೂಡಿದೆ.