ಕೀವ್ (ಉಕ್ರೇನ್) : ಕಳೆದ ಒಂದು ದಿನದಲ್ಲಿ ರಷ್ಯಾದ ಸುಮಾರು 200 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ರಷ್ಯಾದ ವಿವಿಧ ಯುದ್ಧೋಪಕರಣಗಳನ್ನು ಸಹ ನಾಶಪಡಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿಕೊಂಡಿದೆ. ಆದರೆ, ಉಕ್ರೇನ್ ಮಿಲಿಟರಿ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಖಚಿತವಾಗಿಲ್ಲ. ಕಳೆದ 48 ಗಂಟೆಗಳಲ್ಲಿ ಯುದ್ಧ ನಡೆಯುತ್ತಿರುವ ಮುಂಚೂಣಿ ಪ್ರದೇಶಗಳಾದ ಡೊನೆಟ್ಸ್ಕ್ ಪ್ರದೇಶದ ಲೈಮನ್, ಮರಿಂಕಾ ಮತ್ತು ಬಖ್ಮುತ್ ಮುಂತಾದೆಡೆ 20 ಕ್ಕೂ ಹೆಚ್ಚು ಮುಖಾಮುಖಿ ಹೋರಾಟಗಳು ನಡೆದಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾ ಭಾನುವಾರ ಉಕ್ರೇನ್ ಮೇಲೆ 25ಕ್ಕೂ ಹೆಚ್ಚು ವಾಯುದಾಳಿಗಳನ್ನು ನಡೆಸಿದೆ ಎಂದು ರಷ್ಯಾದ ಜನರಲ್ ಸ್ಟಾಫ್ ಹೇಳಿಕೆ ತಿಳಿಸಿದೆ. ಖಾರ್ಕಿವ್‌ನ ಕುಪ್ಯಾನ್ಸ್ಕ್ ಪ್ರದೇಶದಲ್ಲಿ ರಷ್ಯಾ ಪಡೆಗಳು ಭಾರೀ ಪ್ರಮಾಣದ ಫಿರಂಗಿ ಮತ್ತು ಮಾರ್ಟರ್ ಗುಂಡಿನ ದಾಳಿ ನಡೆಸಿವೆ. ಕಳೆದ ಒಂದು ತಿಂಗಳಿನಿಂದಲೂ ಈ ಪ್ರದೇಶವನ್ನು ಭೇದಿಸಲು ರಷ್ಯನ್ನರು ಪ್ರಯತ್ನಿಸುತ್ತಿದ್ದಾರೆ.
ಉಕ್ರೇನ್ ಮೇಲುಗೈ: ಡೊನೆಟ್ಸ್ಕ್ ಮುಂಚೂಣಿ ಹೋರಾಟದ ಪ್ರದೇಶಗಳಲ್ಲಿ ಗುಂಡಿನ ದಾಳಿಯ ಮೂಲಕ ಪರೋಕ್ಷ ರೂಪದಲ್ಲಿ ಹೋರಾಟ ನಡೆದಿದೆ. ಇಲ್ಲಿ ಸೇನಾಪಡೆಗಳ ಭೌತಿಕ ಚಲನೆ ಕಡಿಮೆಯಾಗಿದೆ. ಆದಾಗ್ಯೂ, ಬಖ್ಮುತ್ ಸುತ್ತಲೂ ತಾವು ಮೇಲುಗೈ ಸಾಧಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
"ಸೇನಾ ಪಡೆಗಳು ತಾವು ಸಾಧಿಸಿದ ಮುನ್ನಡೆಯನ್ನು ಕಾಯ್ದುಕೊಂಡು ಆಕ್ರಮಣ ಕಾರ್ಯಾಚರಣೆಗಳನ್ನು ಮುಂದುವರೆಸುತ್ತವೆ ಮತ್ತು ಶತ್ರುಗಳನ್ನು ಹಿಂದಕ್ಕೆ ತಳ್ಳುತ್ತವೆ. ಕಳೆದ ದಿನದಲ್ಲಿ, ಉಕ್ರೇನಿಯನ್ ಪಡೆಗಳು ಬಖ್ಮುತ್ ಸುತ್ತಲಿನ ದಕ್ಷಿಣ ಮತ್ತು ಉತ್ತರದ ಪಾರ್ಶ್ವಗಳಲ್ಲಿ 600 ರಿಂದ 1,000 ಮೀಟರ್ ಗಳಷ್ಟು ಮುನ್ನಡೆದವು" ಎಂದು ಈಸ್ಟರ್ನ್ ಗ್ರೂಪಿಂಗ್ ಆಫ್ ದಿ ಆರ್ಮಡ್ ಫೋರ್ಸಸ್ ವಕ್ತಾರ ಸೆರ್ಹಿ ಚೆರೆವಟಿ ಹೇಳಿದ್ದಾರೆ.
ದಕ್ಷಿಣದಲ್ಲಿ, ಉಕ್ರೇನಿಯನ್ ಪಡೆಗಳು ರಷ್ಯಾದ ಗಡಿಗಳನ್ನು ಭೇದಿಸಲು ಪ್ರಯತ್ನಿಸಿದವು. ನೊವೊಡಾರಿವ್ಕಾ ಪ್ರದೇಶದಲ್ಲಿ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆಯುವ ರಷ್ಯಾದ ಪ್ರಯತ್ನಗಳು ವಿಫಲವಾಗಿದೆ ಎಂದು ಜನರಲ್ ಸ್ಟಾಫ್ ಪ್ರಕಟಣೆ ತಿಳಿಸಿದೆ. ರಷ್ಯಾದ ಫಿರಂಗಿದಳವು ಜಪೋರಿಝಿಯಾ ಪ್ರದೇಶದ ಮುಂಚೂಣಿಯಲ್ಲಿ ಸುಮಾರು 30 ವಸಾಹತುಗಳ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ ಎಂದು ಅದು ಹೇಳಿದೆ.
ಜೂನ್ 6ರಂದು ಹಾನಿಗೊಳಗಾಗಿ ಪ್ರವಾಹ ಉಂಟು ಮಾಡಿದ್ದ ಡಿನಿಪ್ರೊ ನದಿಯ ಪೂರ್ವ ದಂಡೆಯನ್ನು ಮರಳಿ ವಶಪಡಿಸಿಕೊಳ್ಳಲು ರಷ್ಯನ್ ಪಡೆಗಳು ಪರದಾಡುತ್ತಿವೆ ಎಂದು ದಕ್ಷಿಣದಲ್ಲಿ ಉಕ್ರೇನಿಯನ್ ಪಡೆಗಳ ವಕ್ತಾರ ನಟಾಲಿಯಾ ಹುಮೆನ್ಯುಕ್ ತಿಳಿಸಿದ್ದಾರೆ.
ವರ್ಷಕ್ಕಿಂತಲೂ ಹೆಚ್ಚು ಅವಧಿಯಿಂದ ನಡೆಯುತ್ತಿರುವ ಯುದ್ಧ: ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ಕಾಲದಿಂದ ನಡೆದಿರುವ ಯುದ್ಧದಲ್ಲಿ ಕನಿಷ್ಠ ನೂರಾರು ಮಕ್ಕಳು ಸೇರಿದಂತೆ ಸಾವಿರಾರು ಉಕ್ರೇನಿಯನ್ ನಾಗರಿಕರು ಮತ್ತು ಎರಡೂ ಕಡೆಗಳ ಹತ್ತಾರು ಸಾವಿರ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಆದಾಗ್ಯೂ ನಿಖರ ಅಂಕಿ ಅಂಶಗಳನ್ನು ಕ್ರೋಢೀಕರಿಸುವುದು ಕಷ್ಟಕರವಾಗಿದೆ. ಯುದ್ಧದ ಕಾರಣದಿಂದ ಲಕ್ಷಾಂತರ ಜನ ಸುರಕ್ಷತೆಯ ಹುಡುಕಾಟದಲ್ಲಿ ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಿದ್ದಾರೆ.
ಇದನ್ನೂ ಓದಿ : Wagner Group: ಯಾರೀತ ಪ್ರಿಗೊಜಿನ್? ಪುಟಿನ್ ವಿರುದ್ಧವೇ ದಂಗೆಯೆದ್ದ ವ್ಯಾಗ್ನರ್ ಸೇನೆ ಬಲ ಎಷ್ಟು?