ಕೀವ್( ಉಕ್ರೇನ್): ನಮ್ಮ ಸರ್ಕಾರ ಸೈನ್ಯಕ್ಕೆ ಧನಸಹಾಯ ನೀಡಲು ಮತ್ತು ಯುದ್ಧದಿಂದ ನಾಶವಾದ ನಗರಗಳು ಮತ್ತು ಪಟ್ಟಣಗಳನ್ನು ಪುನರ್ನಿರ್ಮಿಸಲು ಹಣ ಸಂಗ್ರಹಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಿಸಿದ್ದಾರೆ. ರಷ್ಯಾದ ಪಡೆಗಳನ್ನು ಹೊರಹಾಕಿದ ಸ್ಥಳಗಳಲ್ಲಿ ವಿದ್ಯುತ್, ಅನಿಲ, ನೀರು ಮತ್ತು ಫೋನ್ ಸೇವೆಯನ್ನು ಪುನಃಸ್ಥಾಪಿಸಲು ಈಗಾಗಲೇ ಕೆಲಸ ನಡೆಯುತ್ತಿದೆ. ಆಸ್ಪತ್ರೆಗಳನ್ನು ಮರು ಸಜ್ಜುಗೊಳಿಸಲು ಮತ್ತು ಬಂಕರ್ಗಳನ್ನು ತೆಗೆದುಹಾಕಲು ಹೆಚ್ಚಿನ ಕಾರ್ಯ ಮಾಡಬೇಕಾಗಿದೆ ಎಂದು ಅವರು ಮಂಗಳವಾರ ರಾತ್ರಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಮೊದಲ ತಿಂಗಳಲ್ಲಿ $50 ಮಿಲಿಯನ್‌ಗಿಂತಲೂ ಹೆಚ್ಚು ನೆರವು ಹರಿದು ಬಂದಿದೆ. ಉಕ್ರೇನ್ ಟೆನಿಸ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಹಾಗೂ ಮಾಜಿ ಸಾಕರ್ ಆಟಗಾರ ಆಂಡ್ರಿ ಶೆವ್ಚೆಂಕೊ ಅವರನ್ನು ನಿಧಿಸಂಗ್ರಹ ವೇದಿಕೆಗೆ ರಾಯಭಾರಿಯಾಗಿದ್ದಾರೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಕಳೆದ ದಿನದಿಂದ ಪೂರ್ವ ಡಾನ್ಬಾಸ್ ಪ್ರದೇಶದಲ್ಲಿ ರಷ್ಯಾದ ಪಡೆಗಳು ಯಾವುದೇ ಮಹತ್ವದ ಪ್ರಗತಿಯನ್ನು ಸಾಧಿಸಿಲ್ಲ. ಈ ಪ್ರದೇಶದಲ್ಲಿ ಸೈನಿಕರ ರಕ್ಷಣಾ ಕಾರ್ಯ ಮುಂದುವರೆದಿದೆ. ರಷ್ಯನ್ನರು ಸ್ಪಷ್ಟವಾಗಿ ಇಷ್ಟೊಂದು ಪ್ರತಿರೋಧವನ್ನು ಎದುರಿಸುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ.
ರಷ್ಯಾದ ಸೈನ್ಯವು ಎಸಗಿದ ಯುದ್ಧಾಪರಾಧಗಳ ಬಗ್ಗೆ ದೃಢಪಡಿಸಿದ ಮಾಹಿತಿಯೊಂದಿಗೆ ಉಕ್ರೇನ್ ಮುಂದಿನ ವಾರ ವಿಶೇಷ "ಬುಕ್ ಆಫ್ ಎಕ್ಸಿಕ್ಯೂಶನರ್ಸ್" ಅನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದು ಇದೇ ವೇಳೆ ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ಗೆ ಕ್ಷಿಪಣಿ ಕೊಟ್ಟರೆ ಕೀವ್ ನಾಶ: ಪಶ್ಚಿಮ ರಾಷ್ಟ್ರಗಳಿಗೆ ಪುಟಿನ್ ಎಚ್ಚರಿಕೆ