ಆಕ್ಲೆಂಡ್ (ನ್ಯೂಜಿಲೆಂಡ್): ಆಕ್ಲೆಂಡ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮಹಿಳಾ ಫಿಫಾ ವಿಶ್ವಕಪ್‌ನ ಮೊದಲ ಪಂದ್ಯಾರಂಭಕ್ಕೆ 12 ಗಂಟೆಗಳು ಬಾಕಿ ಇರುವಾಗ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
"ಬೆಳಿಗ್ಗೆ 7:30ಕ್ಕೆ ಬಂದೂಕುಧಾರಿ ಇಲ್ಲಿನ ಲೋವರ್ ಕ್ವೀನ್ ಸ್ಟ್ರೀಟ್‌ನಲ್ಲಿಯ ಮುಖ್ಯ ರೈಲುನಿಲ್ದಾಣ ಮತ್ತು ಫೆರ್ರಿ ಟರ್ಮಿನಲ್ ಸಮೀಪದ ನಿರ್ಮಾಣದ ಹಂತದ ಕಟ್ಟಡದ ಮೇಲೇರಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದ್ದ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಆರು ಜನರು ಗಂಭಿರವಾಗಿ ಗಾಯಗೊಂಡರು. ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ" ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ್ಳಿ ಮಾಹಿತಿ ಹಂಚಿಕೊಂಡಿದ್ದಾರೆ.
ಘಟನೆಯ ಬಗ್ಗೆ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಪ್ರತಿಕ್ರಿಯಿಸಿ, "ಮಹಿಳಾ ವಿಶ್ವಕಪ್ ಪಂದ್ಯ ಸುಸಾಂಗವಾಗಿ ನಡೆಯಲಿದೆ" ಎಂದು ಹೇಳಿದ್ದಾರೆ. "ಫಿಫಾ ಮಹಿಳಾ ವಿಶ್ವಕಪ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಮೊದಲ ಪಂದ್ಯವನ್ನು ನಡೆಸಲಾಗುತ್ತದೆ. ನಾವು ಫಿಫಾ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ಪಂದ್ಯ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ" ಎಂದು ಹೇಳಿದ್ದಾರೆ.
ಸ್ಥಳೀಯ ಅಧಿಕಾರಿಗಳು ರಾಷ್ಟ್ರೀಯ ಭದ್ರತೆಯಲ್ಲಿ ಯಾವುದೇ ವೈಫಲ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಯಾವುದೇ ರಾಜಕೀಯ ಉದ್ದೇಶದಿಂದಲೂ ಘಟನೆ ಸಂಭವಿಸಿದಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ನ್ಯೂಜಿಲೆಂಡ್ ಮತ್ತು ನಾರ್ವೆ ನಡುವಿನ ಮಹಿಳಾ ವಿಶ್ವಕಪ್‌ನ ಮೊದಲ ಪಂದ್ಯ ಗುರುವಾರ ರಾತ್ರಿ ಪ್ರಾರಂಭವಾಗಲಿದೆ. ಈ ಪಂದ್ಯ ವೀಕ್ಷಿಸಲು 40,000ಕ್ಕೂ ಹೆಚ್ಚಿನ ವೀಕ್ಷಕರು ಈಡನ್ ಪಾರ್ಕ್ ಕ್ರೀಡಾಂಗಣಕ್ಕೆ ಬರುವ ನಿರೀಕ್ಷೆ ಇದೆ.
ಅಮೆರಿಕದಲ್ಲೂ ಇಂತಹದ್ದೇ ಘಟನೆ: ಅಮೆರಿಕದ ಹ್ಯಾಂಪ್ಟನ್‌ನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ, ನಾಲ್ವರು ಪ್ರಾಣ ಕಳೆದುಕೊಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಸುಮಾರು 8 ಸಾವಿರಕ್ಕೂ ಹೆಚ್ಚಿನ ಜನ ವಾಸವಿರುವ ಹ್ಯಾಂಪ್ಟನ್‌ನ ಉಪವಿಭಾಗದಲ್ಲಿ ಶೂಟೌಟ್ ನಡೆದಿತ್ತು. ದಾಳಿ ನಡೆಸಿದ ಬಳಿಕ ಶಂಕಿತ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.
ನೈಜೀರಿಯಾದಲ್ಲಿ ನಡೆದಿದ್ದ ಗುಂಡಿನ ದಾಳಿ : ನೈಜೀರಿಯಾದ ಬೆನ್ಯೂ ರಾಜ್ಯದ ಗ್ರಾಮವೊಂದಕ್ಕೆ ನುಗ್ಗಿದ ಬಂದೂಕುಧಾರಿಗಳು 24 ಗ್ರಾಮಸ್ಥರನ್ನು ಅಮಾನುಷವಾಗಿ ಹತ್ಯೆಗೈದಿದ್ದ ಘಟನೆ ಜುಲೈ 8ರಂದು ನಡೆದಿತ್ತು. ಉಕುಮ್ ಜಿಲ್ಲೆಯ ಅಕ್ಪುನಾ ಗ್ರಾಮದ ಜನರ ಮೇಲೆ ಎರಡು ಗಂಟೆಗೂ ಹೆಚ್ಚು ಕಾಲ ಮನಬಂದಂತೆ ಗುಂಡು ಹಾರಿಸಿದ್ದರು.
ಇದನ್ನೂ ಓದಿ: ಅಮೆರಿಕದ ಹ್ಯಾಂಪ್ಟನ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ; 4 ಮಂದಿ ಸಾವು