ಇಸ್ತಾಂಬುಲ್ (ಟರ್ಕಿ): ಪ್ರಬಲ ಭೂಕಂಪಕ್ಕೆ ತತ್ತರಿಸಿರುವ ಟರ್ಕಿ, ಸಿರಿಯಾದಲ್ಲಿ ಕರುಣಾಜನಕ ಕಥೆಗಳು ಒಂದೊಂದರಂತೆ ಹೊರಬರುತ್ತಿವೆ. 296 ಗಂಟೆಗಳ ಕಾಲ ಕಲ್ಲು ಮಣ್ಣು, ಸಿಮೆಂಟ್ ಸೇರಿದಂತೆ ಇತರೆ ಕಟ್ಟಡದ ಅವಶೇಷಗಳಡಿ ಸಿಲುಕಿ ಸಾವು, ಬದುಕಿನ ನಡುವೆ ಉಸಿರಾಡುತ್ತಿದ್ದ 12 ವರ್ಷದ ಮಗು ಸೇರಿ ದಂಪತಿಯನ್ನು ಪವಾಡಸದೃಶ ರೀತಿಯಲ್ಲಿ ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಆದರೆ, ರಕ್ಷಣಾ ಕಾರ್ಯಾಚರಣೆಯ ಬಳಿಕ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಉಭಯ ದೇಶಗಳಲ್ಲಿ ಫೆಬ್ರವರಿ 6 ರಂದು ಭೀಕರ ಭೂಕಂಪನ ಸಂಭವಿಸಿತ್ತು.
ಘಾನಾ ಫುಟ್ಬಾಲ್ ಆಟಗಾರ ಬಲಿ: ಭೂಕಂಪನದಲ್ಲಿ ಸಿಲುಕಿ ಘಾನಾದ ಫುಟ್ಬಾಲ್ ಆಟಗಾರ, 31 ವರ್ಷದ ಕ್ರಿಸ್ಟಿಯಾನ್ ಅಟ್ಸು ಮೃತಪಟ್ಟಿದ್ದು, ಅವರ ಶವ ದೊರೆತಿದೆ. ಫೆಬ್ರವರಿ 5 ರಂದು ಫುಟ್ಬಾಲ್ ಪಂದ್ಯ ಮುಗಿಸಿ ಅವರು ಘಾನಾಕ್ಕೆ ತೆರಳಬೇಕಿತ್ತು. ಆದರೆ ಪಂದ್ಯ ಜಯಿಸಿದ ಅಟ್ಸು ಟರ್ಕಿಯ ಅಪಾರ್ಟ್ಮೆಂಟ್ವೊಂದರಲ್ಲಿ ಉಳಿಯಲು ನಿರ್ಧರಿಸಿದ್ದರು. ತೀವ್ರ ಭೂಕಂಪನಕ್ಕೆ ಆ ಕಟ್ಟಡ ನೆಲಸಮಗೊಂಡಿತ್ತು.
ಇದನ್ನೂ ಓದಿ: ಟರ್ಕಿ ಭೂಕಂಪದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಳ್ಳುತೇವೆ: ಸಿಎಂ ಬೊಮ್ಮಾಯಿ
46 ಸಾವಿರಕ್ಕೇರಿದ ಸಾವಿನ ಸಂಖ್ಯೆ: ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪನದಿಂದ ಸಾವನ್ನಪ್ಪಿದವರ ಸಂಖ್ಯೆ 46 ಸಾವಿರಕ್ಕೇರಿದೆ. ಟರ್ಕಿಯೊಂದರಲ್ಲೇ 3.45 ಲಕ್ಷ ಅಪಾರ್ಟ್ಮೆಂಟ್ಗಳು ಕುಸಿದು ಬಿದ್ದಿವೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಷ್ಟು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ.
ಭಾರತದ ಸಹಾಯ ಹಸ್ತ: ಭೂಕಂಪನಪೀಡಿತ ದೇಶಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ಟರ್ಕಿಗೆ ಎನ್ಡಿಆರ್ಎಫ್ ಮತ್ತು ವೈದ್ಯಕೀಯ, ರಕ್ಷಣಾ ತಂಡಗಳನ್ನು ಪರಿಹಾರ ಸಾಮಗ್ರಿಗಳೊಂದಿಗೆ ತಕ್ಷಣವೇ ಕಳುಹಿಸಿಕೊಟ್ಟಿದೆ. ವಿಶೇಷ ತರಬೇತಿ ಪಡೆದಿರುವ ಶ್ವಾನಗಳು ಮತ್ತು 100 ಸಿಬ್ಬಂದಿಯನ್ನು ಹೊಂದಿದ ಎನ್ಡಿಆರ್ಎಫ್ನ ಎರಡು ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿವೆ. ನುರಿತ ವೈದ್ಯರು, ವೈದ್ಯಕೀಯ ತಂಡಗಳು ಅಗತ್ಯ ವಸ್ತುಗಳೊಂದಿಗೆ ತೆರಳಿದ್ದರು. ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಡ್ ಎರ್ಡೋಗನ್ ಅವರಿಗೆ ಟ್ಯಾಗ್ ಮಾಡಿದ್ದರು.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಭೂಕಂಪ.. ಟರ್ಕಿ-ಸಿರಿಯಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 41ಸಾವಿರಕ್ಕೆ ಏರಿಕೆ