ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಪೂರ್ವದಲ್ಲಿರುವ ಬೋಕ್ಸ್‌ಬರ್ಗ್ ಪಟ್ಟಣದಲ್ಲಿ ಶನಿವಾರ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಾಗಿಸುತ್ತಿದ್ದ ಟ್ರಕ್ ಸ್ಫೋಟಗೊಂಡಿದ್ದು, ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 50 ಮಂದಿ ಗಾಯಗೊಂಡಿದ್ದಾರೆ ಎಂದು ತುರ್ತುಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೇಳುವಂತೆ, ಸಂಚಾರ ಸಮಯದಲ್ಲಿ ಟ್ರಕ್‌ನ ಮೇಲ್ಭಾಗ ತಗ್ಗಾಗಿದ್ದ ಸೇತುವೆಯನ್ನು ಸವರಿಕೊಂಡು ಹೋಗಿದ್ದು, ಆ ಸಂದರ್ಭದಲ್ಲಿ ಕಾಣಿಸಿಕೊಂಡು ಜ್ವಾಲೆ ಸ್ಫೋಟಕ್ಕೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ನಿವಾಸಿಗಳು ಸ್ಫೋಟದ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದು, ಇದರಲ್ಲಿ ಟ್ರಕ್ ಸ್ಫೋಟಗೊಂಡ ಸ್ಥಳದಲ್ಲಿ ಕಾರುಗಳು ವೇಗವಾಗಿ ಹೋಗುತ್ತಿರುವುದು, ಅಲ್ಲಿದ್ದ ಪಾದಚಾರಿಗಳು ಬೆಂಕಿಯಿಂದ ತಪ್ಪಿಸಿಕೊಂಡು ಓಡುತ್ತಿರುವುದನ್ನು ಕಾಣಬಹುದು. ಸ್ಥಳೀಯ ವರದಿಗಳ ಪ್ರಕಾರ ಟ್ರಕ್ ಸ್ಫೋಟದಿಂದಾಗಿ ಹಲವಾರು ಮನೆಗಳು ಮತ್ತು ವಾಹನಗಳು ಹಾನಿಗೊಳಗಾಗಿವೆ. ಟ್ಯಾಂಕರ್ ಸಮೀಪದ ಒ ಆರ್ ಟ್ಯಾಂಬೋ ಮೆಮೊರಿಯಲ್ ಆಸ್ಪತ್ರೆಗೆ ಗ್ಯಾಸ್ ಸಾಗಿಸುತ್ತಿತ್ತು ಎನ್ನಲಾಗಿದೆ. ಈ ಅಪಘಾತದಲ್ಲಿ ಗಾಯಗೊಂಡ ಕೆಲವರಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸ್ಫೋಟ ಮತ್ತು ಬೆಂಕಿಯ ಕಾರಣದಿಂದಾಗಿ ಅದೇ ಆಸ್ಪತ್ರೆಯ ಕೆಲವು ಘಟಕಗಳಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲಾಗಿದೆ.
ಸ್ಥಳೀಯ ನಿವಾಸಿ ಸೈಮನ್ ಲ್ಯಾಪಿಂಗ್ ಸ್ಥಳೀಯ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಾನು ನೋಡಿದ ಆ ಸ್ಪೋಟದ ದೃಶ್ಯ ನಿಜಕ್ಕೂ ಭಯಂಕರವಾಗಿತ್ತು. ಹಿಂದೆಂದೂ ಈ ರೀತಿಯ ದೃಶ್ಯವನ್ನು ಕಂಡಿರಲಿಲ್ಲ. ಸ್ಫೋಟ ಸಂಭವಿಸಿದ ವೇಳೆ ನಾನು ಆರು ವಯಸ್ಕರು ಹಾಗೂ ಇಬ್ಬರು ಮಕ್ಕಳ ದೇಹಗಳನ್ನು ಕಣ್ಣಾರೆ ನೋಡಿದ್ದೇನೆ. ಆ ದೃಶ್ಯ ಭಯಾನಕವಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.
ವಿಪತ್ತು ನಿರ್ವಹಣಾ ಕ್ಲಸ್ಟರ್ ಈ ದುರಂತದ ಬಲಿಪಶುಗಳಿಗೆ ಸ್ಥಳದಲ್ಲೇ ಸಹಾಯ ಮಾಡುತ್ತಿದೆ. ಈ ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಎಕುರ್ಹುಲೆನಿಯ ಮೇಯರ್ ತಾನಿಯಾ ಕ್ಯಾಂಪ್ಬೆಲ್ ತಿಳಿಸಿದ್ದಾರೆ. ನಗರದ ಪರವಾಗಿ, ಕಾರ್ಯನಿರ್ವಾಹಕ ಮೇಯರ್ ಅವರ ಕಚೇರಿಯಿಂದ ಸಮಗ್ರ ತನಿಖೆ ನಡೆಯುತ್ತದೆ. ಸ್ಫೋಟಕ್ಕೆ ಕಾರಣಕರ್ತರಾದ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಧಾರ್ಮಿಕ ಶಾಲೆಯಲ್ಲಿ ಬಾಂಬ್ ಸ್ಫೋಟ: ವಿದ್ಯಾರ್ಥಿಗಳು ಸೇರಿ 19 ಸಾವು