ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಎಲೋನ್ ಮಸ್ಕ್ ಒಡೆತನದ ಕಂಪನಿ ಟೆಸ್ಲಾ ವಿಶ್ವದ ಮೋಸ್ಟ್ ವಾಂಟೆಡ್ ಕಾರ್ ಬ್ರಾಂಡ್ ಆಗಿದೆ ಎಂದು ಹೊಸ ವರದಿಯೊಂದು ಹೇಳಿದೆ. ಯುಕೆ ಮೂಲದ ಸಂಸ್ಥೆ ಆಟೋ ಟ್ರೇಡರ್ ಪ್ರಕಾರ, ಟೆಸ್ಲಾ ವಿಶ್ವದಲ್ಲಿ ಅತಿ ಹೆಚ್ಚು ಜನರ ಖರೀದಿಸಲು ಬಯಸುವ ಕಾರ್ ಬ್ರ್ಯಾಂಡ್ ಆಗಿದೆ. ಕಾರು ಕೊಳ್ಳಲು 39 ದೇಶಗಳಲ್ಲಿ ಗೂಗಲ್ ಮೂಲಕ ಅತಿ ಹೆಚ್ಚು ಹುಡುಕಲಾದ ಕಾರ್ ಟೆಸ್ಲಾ ಆಗಿದೆ. ಇಡೀ ಪ್ರಪಂಚದಲ್ಲಿ ಜನ ಅತಿ ಹೆಚ್ಚಾಗಿ ಖರೀದಿಸಲು ಬಯಸುವ ಕಾರುಗಳನ್ನು ಕಂಡುಹಿಡಿಯಲು 180 ಕ್ಕೂ ಹೆಚ್ಚು ದೇಶಗಳಲ್ಲಿ 200 ಕ್ಕೂ ಹೆಚ್ಚು ಕಾರ್ ಬ್ರ್ಯಾಂಡ್‌ಗಳಿಗಾಗಿ ಜಾಗತಿಕ ಸರ್ಚ್ ಡೇಟಾವನ್ನು ವಿಶ್ಲೇಷಿಸಲಾಗಿದೆ.
50 ರಾಜ್ಯಗಳಲ್ಲಿ 25ರಲ್ಲಿ ಮೊದಲ ಸ್ಥಾನ: ವರದಿಯ ಪ್ರಕಾರ ಟೆಸ್ಲಾ ಅಮೆರಿಕದಲ್ಲಿ (50 ರಾಜ್ಯಗಳ ಪೈಕಿ 25 ರಲ್ಲಿ) ಮೊದಲ ಸ್ಥಾನದಲ್ಲಿದೆ. ಹಾಗೆಯೇ ಕೆನಡಾ, ಫ್ರಾನ್ಸ್, ಸ್ಪೇನ್, ಜರ್ಮನಿ, ಆಸ್ಟ್ರೇಲಿಯಾ, ಯುಎಇ ಮತ್ತು ಸ್ಕ್ಯಾಂಡಿನೇವಿಯಾ ದೇಶಗಳಲ್ಲೂ ಟೆಸ್ಲಾ ನಂ.1 ಬೇಡಿಕೆಯ ಕಾರ್ ಆಗಿದೆ. ಐಸ್‌ಲ್ಯಾಂಡ್, ಮೆಕ್ಸಿಕೋ, ಅರ್ಜೆಂಟೀನಾ, ಭಾರತ ಮತ್ತು ಫಿಲಿಪೈನ್ಸ್ ಸೇರಿದಂತೆ 27 ದೇಶಗಳಲ್ಲಿ ಹೆಚ್ಚು ಹುಡುಕಲ್ಪಟ್ಟ ಕಾರುಗಳ ಪಟ್ಟಿಯಲ್ಲಿ ಜೀಪ್ ಮೊದಲನೇ ಸ್ಥಾನದಲ್ಲಿದ್ದು, ಜಾಗತಿಕವಾಗಿ ಇದು ಎರಡನೇ ಸ್ಥಾನದಲ್ಲಿದೆ.
ನೀವು ಮಾರಾಟ ಮಾಡಲು ಬಯಸಿದ ತಕ್ಷಣ ಸೇಲ್: ಯಾರಾದರೂ ತಮ್ಮ ಜೀಪ್ ರಾಂಗ್ಲರ್ ಕಾರನ್ನು ಮಾರಾಟ ಮಾಡಲು ಬಯಸಿದರೆ ಅದು ತಕ್ಷಣವೇ ಮಾರಾಟವಾಗಿ ಬಿಡುತ್ತದೆ. ಪ್ರತಿ ತಿಂಗಳು 'ಸೆಕೆಂಡ್ ಹ್ಯಾಂಡ್ ಜೀಪ್' ಗಾಗಿ ಆನ್ಲೈನ್ನಲ್ಲಿ ಸುಮಾರು 4,500 ಸರ್ಚ್ ಮಾಡಲಾಗುತ್ತದೆ ಎಂದು ವರದಿ ಹೇಳಿದೆ. ಇದಲ್ಲದೆ, ಬಿಎಂಡಬ್ಲ್ಯೂ ಮತ್ತು ಟೊಯೋಟಾ ಹೆಚ್ಚು ಹುಡುಕಲ್ಪಟ್ಟ ಕಾರ್ ಬ್ರಾಂಡ್‌ಗಳಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ ಎಂದು ವರದಿ ತೋರಿಸಿದೆ.
ಈ ರಾಷ್ಟ್ರಗಳಲ್ಲಿ BMW ಬೆಸ್ಟ್: ಬಿಎಂಡಬ್ಲ್ಯೂ ಇದು ಯುಕೆ, ದಕ್ಷಿಣ ಆಫ್ರಿಕಾ, ಎಸ್ಟೋನಿಯಾ ಮತ್ತು ಜಮೈಕಾ ಸೇರಿದಂತೆ 20 ದೇಶಗಳಲ್ಲಿ ಅತಿ ಹೆಚ್ಚು ಜನ ಖರೀದಿಸಲು ಬಯಸುವ ಕಾರ್ ಬ್ರಾಂಡ್ ಆಗಿದೆ. ಹಾಗೆಯೇ ನಮೀಬಿಯಾ, ಲಿಥುವೇನಿಯಾ ಮತ್ತು ವೆನೆಜುವೆಲಾದಲ್ಲಿ ಟೊಯೋಟಾ ಕಾರು ಹೆಚ್ಚು ಜನಪ್ರಿಯವಾಗಿದೆ. ಸೌದಿ ಅರೇಬಿಯಾ, ಮಲೇಷ್ಯಾ ಮತ್ತು ಪೋರ್ಟೊ ರಿಕೊ ಸೇರಿದಂತೆ 11 ದೇಶಗಳಲ್ಲಿ ಮರ್ಸಿಡಿಸ್ ಜನರ ಅಚ್ಚುಮೆಚ್ಚಿನ ಕಾರ್ ಆಗಿದೆ.
ಟಾಪ್ 10ರಲ್ಲಿ ಈ ಕಾರುಗಳು ಉಂಟು: ಎರಡು ಐಕಾನಿಕ್ ಸೂಪರ್‌ಕಾರ್ ಬ್ರಾಂಡ್‌ಗಳಾದ ಲಂಬೋರ್ಗಿನಿ ಮತ್ತು ಫೆರಾರಿ ಕೂಡ ಪ್ರಪಂಚದ ಟಾಪ್ ಟೆನ್ ಕಾರುಗಳ ಪಟ್ಟಿಯಲ್ಲಿವೆ. ಫೆರಾರಿಯು ಇಟಲಿಯಲ್ಲಿ ಖರೀದಿಗಾಗಿ ಹೆಚ್ಚು ಹುಡುಕಲ್ಪಟ್ಟ ವಾಹನವಾಗಿದೆ. ಲಂಬೋರ್ಗಿನಿ ನಾಲ್ಕು ಉತ್ತರ ಅಮೆರಿಕಾದ ದೇಶಗಳಾದ ಹೊಂಡುರಾಸ್, ಕೇಮನ್ ದ್ವೀಪಗಳು, ಮೊಂಟ್ಸೆರಾಟ್ ಮತ್ತು ಡೊಮಿನಿಕಾಗಳಲ್ಲಿ ಅಚ್ಚು ಮೆಚ್ಚಿನ ಆಯ್ಕೆಯಾಗಿದೆ.
ಆಟೋ ವಲಯದಲ್ಲಿ ಅತಿ ಹೆಚ್ಚು ಗುರುತಿಸಬಹುದಾದ ಕಾರ್ ಬ್ರ್ಯಾಂಡ್‌ಗಳಲ್ಲಿ ಟೆಸ್ಲಾ ಮೋಟಾರ್ಸ್ ಒಂದು. ಇದು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಅಮೆರಿಕ ಮೂಲದ ಕಂಪನಿಯಾಗಿದೆ. 2003 ರಲ್ಲಿ ಮಾರ್ಕ್ ಟಾರ್ಪೆನಿಂಗ್ ಮತ್ತು ಮಾರ್ಟಿನ್ ಎಬರ್ಹಾರ್ಡ್ ಎಂಬುವರು ಕಂಪನಿಯನ್ನು ಸ್ಥಾಪಿಸಿದರು. ಸಂಸ್ಥೆಯ ಮೂರನೇ ಉದ್ಯೋಗಿ ಎಲೋನ್ ಮಸ್ಕ್ ಅವರು ಆರಂಭಿಕವಾಗಿ ಕಂಪನಿಗೆ ಹಣಕಾಸು ಹೂಡಿದ್ದರು.
ಇದನ್ನೂ ಓದಿ : ಖ್ಯಾತ ಅಫ್ಘನ್ ಗಾಯಕಿ ಹಸಿಬಾ ನೂರಿ ಪಾಕಿಸ್ತಾನದಲ್ಲಿ ಕೊಲೆ