ಸ್ಯಾನ್ ಫ್ರಾನ್ಸಿಸ್ಕೊ: ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯ ಪ್ರಶ್ನಾತೀತ ನಾಯಕ ಟೆಸ್ಲಾ ವಿಶ್ವಾದ್ಯಂತ 4000 ಸೂಪರ್ ಚಾರ್ಜರ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಇದು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 34 ರಷ್ಟು ವೃದ್ಧಿಯಾಗಿದೆ. ಫಿನ್‌ಬೋಲ್ಡ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಟೆಸ್ಲಾ ಜಾಗತಿಕವಾಗಿ 3,971 ಸೂಪರ್‌ಚಾರ್ಜರ್ ಸ್ಟೇಷನ್‌ಗಳನ್ನು ಹೊಂದಿದ್ದು, 2021 ರಲ್ಲಿ ಇದೇ ಅವಧಿಯಲ್ಲಿ ಸ್ಥಾಪಿಸಲಾದ 2,966 ಸ್ಟೇಷನ್ಗಳಿಗೆ ಹೋಲಿಸಿದರೆ ಶೇ 33.88 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2022 ರ ಮೊದಲ ಮೂರು ತಿಂಗಳಲ್ಲಿ ಟೆಸ್ಲಾ ಸೂಪರ್ ಚಾರ್ಜರ್ ಸ್ಟೇಷನ್ಗಳು 3,724 ರಷ್ಟಿದ್ದು, ಹಿಂದಿನ ತ್ರೈಮಾಸಿಕದಿಂದ ಶೇ 7.13 ರಷ್ಟು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.
ಒಟ್ಟಾರೆಯಾಗಿ 2021 ರ ಮೂರನೇ ತ್ರೈಮಾಸಿಕದಲ್ಲಿ, ಕಂಪನಿಯು ಜಾಗತಿಕವಾಗಿ 3,254 ಚಾರ್ಜರ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಇತರಡೆಗಳಲ್ಲಿ ಕೂಡ ಟೆಸ್ಲಾ ಸೂಪರ ಚಾರ್ಜರ್ ಕನೆಕ್ಟರ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು 2022 ರ ಎರಡನೇ ತ್ರೈಮಾಸಿಕದ ಅವಧಿಯಲ್ಲಿ 36,165 ರಷ್ಟಿದ್ದು, ಶೇ 34.44 ರಷ್ಟು ಬೆಳವಣಿಗೆ ಪ್ರತಿನಿಧಿಸುತ್ತದೆ. 2022 ರ ಮೊದಲ ತ್ರೈಮಾಸಿಕದಲ್ಲಿ 33,657 ಕನೆಕ್ಟರ್‌ಗಳಿದ್ದವು. 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಇವುಗಳ ಸಂಖ್ಯೆ 31,498ಕ್ಕೆ ಹೆಚ್ಚಾಗಿದ್ದು, ಶೇ 6.85 ರಷ್ಟು ಬೆಳೆದಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದ ಎದುರಾದ ಆರ್ಥಿಕ ಪರಿಣಾಮಗಳ ಸಂಕಷ್ಟದ ಅವಧಿಯಲ್ಲಿಯೂ ಸೂಪರ್ ಚಾರ್ಜರ್ ವಿಭಾಗದಲ್ಲಿ ಟೆಸ್ಲಾ ಬೆಳವಣಿಗೆ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಟೆಸ್ಲಾ ಮುಖ್ಯವಾಗಿ ಚಿಪ್ ಕೊರತೆಯಿಂದ ಸವಾಲುಗಳನ್ನು ಎದುರಿಸುತ್ತಿದ್ದರೂ ಸೂಪರ್ ಚಾರ್ಜರ್ ವಿಭಾಗದಲ್ಲಿ ಬೆಳವಣಿಗೆಯನ್ನು ದಾಖಲಿಸಿದೆ.
ಒಟ್ಟಾರೆಯಾಗಿ ಹೆಚ್ಚಿನ ಸ್ಥಳಗಳನ್ನು ತಲುಪಲು ಕಂಪನಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದು, ಟೆಸ್ಲಾ ಸೂಪರ್ ಚಾರ್ಜರ್ ಸ್ಟೇಷನ್‌ಗಳ ಸ್ಥಾಪನೆಯನ್ನು ಇನ್ನಷ್ಟು ವೇಗಗೊಳಿಸುವ ಸಾಧ್ಯತೆಯಿದೆ. ಹೆಚ್ಚಿನ ಎಲೆಕ್ಟ್ರಿಕಲ್ ವೆಹಿಕಲ್ ತಯಾರಕರು ತಮ್ಮ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದರಿಂದ ಟೆಸ್ಲಾ ಸಾಕಷ್ಟು ಸ್ಪರ್ಧೆಯನ್ನು ಎದುರಿಸುತ್ತಿದೆ.
ಇದನ್ನೂ ಓದಿ: ಟ್ವಿಟರ್ ಆಯ್ತು, ಕೋಕಾ ಕೋಲಾ ಕಂಪನಿ ಮೇಲೆ ಎಲಾನ್ ಮಸ್ಕ್ ಕಣ್ಣು?