ಕಾಬೂಲ್ (ಅಫ್ಘಾನಿಸ್ತಾನ) : ಚೀನಾದ ಬೆಲ್ಟ್ ಮತ್ತು ರೋಡ್ ಫೋರಂನಲ್ಲಿ ತಾಲಿಬಾನ್ ಭಾಗವಹಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಶ್ವದ ಯಾವುದೇ ದೇಶದಿಂದ ಮಾನ್ಯತೆ ಪಡೆಯದಿದ್ದರೂ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಬೆಲ್ಟ್ ಯೋಜನೆಯಲ್ಲಿ ಚೀನಾದೊಂದಿಗೆ ಕೈಜೋಡಿಸಲು ಮುಂದಾಗಿದೆ. ಇದು ಚೀನಾ ಮತ್ತು ತಾಲಿಬಾನ್ ನಡುವೆ ಬಾಂಧವ್ಯ ವೃದ್ಧಿಯಾಗುತ್ತಿರುವ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ತಾಲಿಬಾನ್ ಅಧಿಕಾರಿಗಳು ಮತ್ತು ಸಚಿವರು ಆಗಾಗ ಅಫ್ಘಾನಿಸ್ತಾನ ಕೇಂದ್ರಿತ ವಿಷಯಗಳ ಸಭೆಗಳಲ್ಲಿ ಭಾಗವಹಿಸಲು ಚೀನಾಗೆ ಹೋಗಿ ಬಂದಿದ್ದಾರೆ. ಆದರೆ ಬೆಲ್ಟ್ ಮತ್ತು ರೋಡ್ ಫೋರಂ ಇದು ತಾಲಿಬಾನ್ ಭಾಗವಹಿಸುತ್ತಿರುವ ಉನ್ನತ ಮಟ್ಟದ ಬಹುಪಕ್ಷೀಯ ಶೃಂಗಸಭೆಗಳಲ್ಲಿ ಒಂದಾಗಿದೆ ಎಂದು ದಿ ನ್ಯೂಸ್ ವರದಿ ಮಾಡಿದೆ.
ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಹತ್ವಾಕಾಂಕ್ಷೆಯ ಜಾಗತಿಕ ಮೂಲಸೌಕರ್ಯ ಮತ್ತು ಇಂಧನ ಉಪಕ್ರಮವಾದ ಬೆಲ್ಟ್ ಮತ್ತು ರೋಡ್ ಯೋಜನೆಯ 10ನೇ ವರ್ಷಾಚರಣೆಯ ಅಂಗವಾಗಿ ಮಂಗಳವಾರ ಮತ್ತು ಬುಧವಾರ ಬೀಜಿಂಗ್ನಲ್ಲಿ ಶೃಂಗಸಭೆ ನಡೆಯಲಿದೆ. ತಾಲಿಬಾನ್ ನ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಹಾಜಿ ನೂರುದ್ದೀನ್ ಅಜೀಜಿ ಬೀಜಿಂಗ್ ಗೆ ಪ್ರಯಾಣಿಸಲಿದ್ದಾರೆ ಎಂದು ಸಚಿವಾಲಯದ ವಕ್ತಾರ ಅಖುಂಡ್ ಜಾದಾ ಅಬ್ದುಲ್ ಸಲಾಮ್ ಜವಾದ್ ತಿಳಿಸಿದ್ದಾರೆ. "ಸಚಿವ ಹಾಜಿ ನೂರುದ್ದೀನ್ ಅಜೀಜಿ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ದೊಡ್ಡ ಹೂಡಿಕೆದಾರರನ್ನು ಅಫ್ಘಾನಿಸ್ತಾನಕ್ಕೆ ಆಹ್ವಾನಿಸಲಿದ್ದಾರೆ" ಎಂದು ಅಬ್ದುಲ್ ಸಲಾಮ್ ಜವಾದ್ ಹೇಳಿದರು.
ಆಂತರಿಕ ಸಂಘರ್ಷದಿಂದ ಜರ್ಜರಿತವಾಗಿರುವ ಅಫ್ಘಾನಿಸ್ತಾನದಲ್ಲಿ ಈವರೆಗೂ ಗಣಿಗಾರಿಕೆ ನಡೆಸಲಾಗದ ಅಪಾರ ಖನಿಜ ಸಂಪತ್ತಿದೆ. ಅಫ್ಘಾನಿಸ್ತಾನದಲ್ಲಿ ತಾಮ್ರದಿಂದ ಹಿಡಿದು ಚಿನ್ನ ಮತ್ತು ಲಿಥಿಯಂವರೆಗೆ 1 ಟ್ರಿಲಿಯನ್ ಡಾಲರ್ ನಿಂದ 3 ಟ್ರಿಲಿಯನ್ ಡಾಲರ್ ಮೌಲ್ಯದ ನಿಕ್ಷೇಪಗಳು ಬಳಕೆಯಾಗದೆ ಉಳಿದಿವೆ ಎಂದು 2010ರಲ್ಲಿ ಗಣಿ ಸಚಿವರೊಬ್ಬರು ಹೇಳಿದ್ದರು. ಇಂದು ಅವುಗಳ ಮೌಲ್ಯ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ ಎಂದು ದಿ ನ್ಯೂಸ್ ವರದಿ ಮಾಡಿದೆ.
ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವನೀಯ ಬೃಹತ್ ತಾಮ್ರದ ಗಣಿಯ ಬಗ್ಗೆ ಹಿಂದಿನ ಅಮೆರಿಕ ಬೆಂಬಲಿತ ಸರ್ಕಾರದ ಅಡಿಯಲ್ಲಿ ಪ್ರಾರಂಭವಾದ ಯೋಜನೆಗಳ ಬಗ್ಗೆ ಚೀನಾ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿದೆ. ಚೀನಾಕ್ಕೆ ನೇರ ಪ್ರವೇಶವನ್ನು ಒದಗಿಸಲು ಉತ್ತರ ಅಫ್ಘಾನಿಸ್ತಾನದ ಪರ್ವತ ಪ್ರದೇಶವಾದ ವಖಾನ್ ಕಾರಿಡಾರ್ ಮೂಲಕ ರಸ್ತೆ ನಿರ್ಮಿಸುವ ಯೋಜನೆಗಳ ಬಗ್ಗೆ ಅಜೀಜಿ ಬೀಜಿಂಗ್ನಲ್ಲಿ ಚರ್ಚೆಗಳನ್ನು ಮುಂದುವರಿಸಲಿದ್ದಾರೆ ಎಂದು ಅಖುಂಡ್ಜಾದಾ ಹೇಳಿದರು.
ಇದನ್ನೂ ಓದಿ : ಯುದ್ಧದ ಎಫೆಕ್ಟ್; ಅವಸಾನದತ್ತ ಪ್ಯಾಲೆಸ್ಟೈನ್ನ ತಂತ್ರಜ್ಞಾನ-ಸ್ಟಾರ್ಟ್ ಅಪ್ ಉದ್ಯಮ