ಕೊಲಂಬೊ (ಶ್ರೀಲಂಕಾ): ದೇಶದ ದುರ್ಬಲ ಆರ್ಥಿಕತೆಯನ್ನು ಸರಿಪಡಿಸುವುದು ಮತ್ತು ಇಂಧನ ಕೊರತೆಯನ್ನು ಕೊನೆಗೊಳಿಸುವುದೇ ತಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
ಕೊಲಂಬೊದಲ್ಲಿ ಬುಧವಾರ ತಮ್ಮ ಯುನೈಟೆಡ್ ನ್ಯಾಷನಲ್ ಪಾರ್ಟಿಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸರ್ಕಾರವು ಶಾಂತಿಯುತ ಪ್ರತಿಭಟನೆಯ ವಿರುದ್ಧವಾಗಿಲ್ಲ. ಪ್ರತಿಭಟನಾಕಾರರು ಕಾನೂನನ್ನು ಉಲ್ಲಂಘಿಸದೇ ಪ್ರತಿಭಟನೆ ಕೈಗೊಂಡರೆ ಇದಕ್ಕೆ ಎಲ್ಲ ಸಮಯದಲ್ಲೂ ಅವಕಾಶ ನೀಡುವುದಾಗಿ ಅಭಯ ನೀಡಿದರು.
ಅಲ್ಲದೇ, ದೇಶದ ಅತ್ಯಂತ ಕಷ್ಟದ ಸಮಯದಲ್ಲಿ ನಾನು ಅಧ್ಯಕ್ಷನಾಗಿದ್ದೇನೆ. ಪ್ರಥಮವಾಗಿ ನಾವು ಆರ್ಥಿಕತೆಯನ್ನು ಸರಿಯಾದ ದಾರಿಗೆ ತರಬೇಕಾಗಿದೆ. ಜೊತೆಗೆ ಇಂಧನದ ಕೊರತೆ ನೀಗಿಸಿ, ಸರತಿ ಸಾಲುಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕಿದೆ. ಹಂತ - ಹಂತವಾಗಿ ಇಂಧನಕ್ಕಾಗಿ ಸಾಲು ಗಟ್ಟವುದನ್ನು ಸಂಪೂರ್ಣವಾಗಿ ತೊಡೆದುಹಾಕುವುದೇ ತಮ್ಮ ಸರ್ಕಾರದ ಮುಖ್ಯ ಕಾರ್ಯವಾಗಿದೆ ಎಂದು ವಿಕ್ರಮಸಿಂಘೆ ತಿಳಿದರು.
ಆರ್ಥಿಕ ದಿವಾಳಿಯಿಂದಾಗಿ ಜನರು ರೊಚ್ಚಿಗೆದ್ದು, ಸರ್ಕಾರದ ವಿರುದ್ಧ ರಸ್ತೆಗಿಳಿದು ಹೋರಾಟ ನಡೆಸಿದ್ದರು. ಅಲ್ಲದೇ, ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ದಂಗೆ ಎದ್ದು, ಅಧ್ಯಕ್ಷರ ನಿವಾಸಕ್ಕೇ ಲಗ್ಗೆ ಇಟ್ಟಿದ್ದರು. ಇದರಿಂದಾಗಿ ದೇಶ ಬಿಟ್ಟು ಸಿಂಗಾಪುರಗೆ ಗೊಟಬಯ ಪರಾರಿಯಾಗಿದ್ದರು. ಸಿಂಗಾಪುರದಿಂದಲೇ ಗೊಟಬಯ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದಾದ ನಂತರ ಶ್ರೀಲಂಕಾದ ಸಂಸತ್ತು ಮೊದಲ ಬಾರಿಗೆ ನೇರವಾಗಿ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರಾಗಿ ನೇಮಿಸಿದೆ.
ಇದನ್ನು ಓದಿ: 60 ವರ್ಷ ಹಿಂದೆ ಕಳವಾಗಿದ್ದ ವಿಗ್ರಹ ವಾಷಿಂಗ್ಟನ್ನಲ್ಲಿ ಪತ್ತೆ: ಮರಳಿ ತರಲು ಭಾರತ ಪ್ರಯತ್ನ