ಕೊಲಂಬೊ(ಶ್ರೀಲಂಕಾ): ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಶ್ರೀಲಂಕಾ ತತ್ತರಿಸಿದೆ. ಆಡಳಿತಾರೂಢ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಮತ್ತು ಸಮಗಿ ಜನ ಬಲವೇಗಯಾ (SJB) ಪಕ್ಷದ ಮುಖಂಡ ಸಜಿತ್ ಪ್ರೇಮದಾಸ ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ ಎಂದಿದ್ದಾರೆ.
ಯಕ್ಕಲ ನಗರದಲ್ಲಿ ಸರ್ಕಾರದ ವಿರುದ್ಧ ಎಸ್‌ಜೆಬಿ ಪಕ್ಷ ಆಯೋಜಿಸಿದ್ದ 'ಸಮಗಿ ಬಾಲಾ ಮಾರ್ಚ್' ಐದನೇ ದಿನದ ಕಾರ್ಯಕ್ರಮದಲ್ಲಿ ಸಜಿತ್ ಪ್ರೇಮದಾಸ ಮಾತನಾಡಿದರು. ಪ್ರೇಮದಾಸ ಅವರು ಏಪ್ರಿಲ್ 11ರಂದು ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧದ ಮಹಾಭಿಯೋಗ ಮತ್ತು ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದರು.
ಮಾಡಬೇಕಾದ ಕೆಲಸಗಳ ಬಗ್ಗೆ ತಿಳುವಳಿಕೆ ಇಲ್ಲದವರ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿರುವ ಸಜಿತ್ ಪ್ರೇಮದಾಸ, ದೇಶದಲ್ಲಿನ ನೊಂದವರ ಆಶೋತ್ತರಗಳಿಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಅವಿಶ್ವಾಸ ಗೊತ್ತುವಳಿ ಮಂಡನೆಯೇ ನಿಜವಾದ ದೇಶಭಕ್ತರನ್ನು ಗುರುತಿಸುತ್ತದೆ. ಎರಡು ವರ್ಷಗಳಲ್ಲಿ ದೇಶವನ್ನು ಪತನದಂಚಿಗೆ ಕೊಂಡೊಯ್ದಿರುವ ರಾಜಪಕ್ಸ ಸರ್ಕಾರವನ್ನು ಕೂಡಲೇ ಮನೆಗೆ ಕಳುಹಿಸಬೇಕು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ಏಪ್ರಿಲ್ 9ರಂದು, ಆರ್ಥಿಕ ಬಿಕ್ಕಟ್ಟಿನಿಂದ ನೊಂದಿರುವ ಜನರಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ಒಂದು ವೇಳೆ ಪರಿಹಾರ ನೀಡಲು ವಿಫಲವಾದರೆ ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ದೋಷಾರೋಪಣೆ ಮಂಡಿಸುವುದಾಗಿ ಎಸ್‌ಜೆಬಿ ಪಕ್ಷ ಘೋಷಿಸಿತ್ತು. ಏಪ್ರಿಲ್ 26ರಂದು ಶ್ರೀಲಂಕಾದ ಕ್ಯಾಂಡಿಯಿಂದ ಆರು ದಿನಗಳ 'ಸಮಗಿ ಬಾಲಾ ಮಾರ್ಚ್' ಆರಂಭವಾಗಿದ್ದು, ಭಾನುವಾರ ಅಂದರೆ ಇಂದು ಕೊನೆಗೊಳ್ಳಲಿದೆ.
ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಮತ್ತು ಎಸ್ಜೆಬಿಯನ್ನು ಪ್ರತಿನಿಧಿಸುವ ಲಕ್ಷಾಂತರ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಆಹಾರ ಮತ್ತು ಇಂಧನ ಕೊರತೆ, ಗಗನಕ್ಕೇರುತ್ತಿರುವ ಬೆಲೆಗಳು ಮತ್ತು ವಿದ್ಯುತ್ ಕಡಿತ ಅಲ್ಲಿನ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದ್ದು, ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿವೆ.
ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಮತ್ತೆ ಹೆಚ್ಚಳ: ಹೊಸ ದರ ಹೀಗಿದೆ..