ಇಸ್ಲಾಮಾಬಾದ್ : ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆಯಲ್ಲಿದ್ದಾಗ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಎಂಟು ಯುಎನ್ ಶಾಂತಿಪಾಲಕರಲ್ಲಿ ಆರು ಪಾಕಿಸ್ತಾನಿ ಸೈನಿಕರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಅನ್ನು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (MONUSCO) ವಿಶ್ವಸಂಸ್ಥೆಯ ಸ್ಥಿರೀಕರಣ ಮಿಷನ್‌ನೊಂದಿಗೆ ಶಾಂತಿಪಾಲನಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮಾರ್ಚ್ 29ರಂದು ವಿಚಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಅದು ಪತನಗೊಂಡಿದೆ ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
ವಿಮಾನದಲ್ಲಿ 6 ಪಾಕಿಸ್ತಾನಿ ಸೈನಿಕರು ಸೇರಿದಂತೆ 8 ಯುಎನ್ ಶಾಂತಿಪಾಲಕರಿದ್ದರು. ಅದರಲ್ಲಿ ಯಾರೂ ಬದುಕುಳಿದಿಲ್ಲ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ ಮೃತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪ ಸೂಚಸುತ್ತಿದ್ದೇವೆ ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
ಓದಿ: ವಿಮಾನ ಹಾರಾಟ ಮುನ್ನ ಕಾಕ್‌ಪಿಟ್, ಕ್ಯಾಬಿನ್‌ನ ಸಿಬ್ಬಂದಿಗೆ ಆಲ್ಕೋಹಾಲ್ ಪರೀಕ್ಷೆ ಕಡ್ಡಾಯ - ಡಿಜಿಸಿಎ
ಇದುವರೆಗೆ ಪಾಕಿಸ್ತಾನದ 157 ಶಾಂತಿಪಾಲಕರು ಯುಎನ್ ಮಿಷನ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ವಿಶ್ವದಾದ್ಯಂತ ಅನೇಕ ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ನೀಲಿ ಹೆಲ್ಮೆಟ್‌ಗಳು ನಿರ್ವಹಿಸುವ ಪ್ರಮುಖ ಪಾತ್ರವನ್ನು ಪಾಕಿಸ್ತಾನ ಸೈನ್ಯ ನಿಭಾಯಿಸುತ್ತಿದೆ. 1960 ರಿಂದ ನಮ್ಮ 2,00,000ಕ್ಕೂ ಹೆಚ್ಚು ಸೈನಿಕರು ವಿಶ್ವದ ಬಹುತೇಕ ಎಲ್ಲಾ ಖಂಡಗಳಲ್ಲಿ 46 UN ಮಿಷನ್‌ಗಳಲ್ಲಿ ಗೌರವ ಮತ್ತು ಶೌರ್ಯದಿಂದ ಸೇವೆ ಸಲ್ಲಿಸಿದ್ದಾರೆ ಎಂದ ವಿದೇಶಾಂಗ ಕಚೇರಿ ತಿಳಿಸಿದೆ.
ಪಾಕಿಸ್ತಾನ ಸೇನೆಯು ತನ್ನ ವಾಯುಯಾನ ಘಟಕವನ್ನು ಯುಎನ್ ಮಿಷನ್ ಕಾಂಗೋದಲ್ಲಿ 2011 ರಿಂದ ಶಾಂತಿಪಾಲನಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಕಾಂಗೋದಲ್ಲಿ ವಿಚಕ್ಷಣ ಕಾರ್ಯಾಚರಣೆಯನ್ನು ಕೈಗೊಳ್ಳುವಾಗ 1PUMA ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಇದರಲ್ಲಿ ಮೂವರು ಅಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಆಸಿಫ್ ಅಲಿ ಅವಾನ್, ಪೈಲಟ್ ಮೇಜರ್ ಸಾದ್ ನೊಮಾನಿ ಮತ್ತು ಸಹ-ಪೈಲಟ್ ಮೇಜರ್ ಫೈಜಾನ್ ಅಲಿ ಸೇರಿದಂತೆ ಮೂವರು ಸೈನಿಕರಾದ ಸಮಿ ಉಲ್ಲಾ ಖಾನ್, ಮುಹಮ್ಮದ್ ಇಸ್ಮಾಯಿಲ್ ಮತ್ತು ಮುಹಮ್ಮದ್ ಜಮೀಲ್ ಹುತಾತ್ಮರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿದೆ.