ವಾಷಿಂಗ್ಟನ್ (ಅಮೆರಿಕ): ವಾಷಿಂಗ್ಟನ್ ಡಿಸಿಯ ಮುಖ್ಯ ರಸ್ತೆಯೊಂದರಲ್ಲಿ ಅಪರಿಚಿತರು ಶನಿವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
"ರಾತ್ರಿ 8 ಗಂಟೆ ಸುಮಾರಿಗೆ ಗುಡ್ ಹೋಪ್ ರೋಡ್ ರಸ್ತೆಯ ಆಗ್ನೇಯ 1600 ಬ್ಲಾಕ್ನಲ್ಲಿ ಘಟನೆ ನಡೆದಿದೆ. ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಪುರುಷರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಾಷಿಂಗ್ಟನ್ ಡಿಸಿ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಮುಖ್ಯಸ್ಥೆ ಪಮೇಲಾ ಸ್ಮಿತ್ ಪ್ರತಿಕ್ರಿಯಿಸಿ, "ನಗರದ ಪ್ರಮುಖ ರಸ್ತೆಯೊಂದರಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದರು. ಗಾಯಾಳುಗಳ ಸ್ಥಿತಿಗತಿ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾದಲ್ಲಿ ಇಂತಹ ದಾಳಿಗಳು ಸ್ವೀಕಾರಾರ್ಹವಲ್ಲ. ಇದು ಯುದ್ಧಭೂಮಿಯಲ್ಲ. ನಮ್ಮ ಎಲ್ಲ ನಾಗರಿಕರು ಸುರಕ್ಷಿತವಾಗಿರಬೇಕೆಂದು ನಾವು ಬಯಸುತ್ತೇವೆ" ಎಂದರು.
"ಅಪರಿಚಿತರ ಗುಂಡಿನ ದಾಳಿ ಬಗ್ಗೆ ಸಾರ್ವಜನಿಕರಲ್ಲಿ ಸೂಕ್ತ ಮಾಹಿತಿ ಇದ್ದರೆ ನೀಡುವಂತೆಯೂ ಅವರು ಕೋರಿದ್ದಾರೆ. ದಾಳಿಯಲ್ಲಿ ಇನ್ನೂ ಯಾರಿಗಾದರೂ ಗಾಯಗಳಾಗಿದ್ದರೆ ಮಾಹಿತಿ ನೀಡಬಹುದು. ನಗರದಲ್ಲಿ ಹಿಂಸಾಚಾರ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ. ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸುತ್ತಾರೆ" ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಗುಂಡಿನ ದಾಳಿ : ಕಳೆದ ತಿಂಗಳು ಶ್ವೇತಭವನದ ಸಮೀಪದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಸುಮಾರು 9 ಮಂದಿ ಗಂಭೀರ ಗಾಯಗೊಂಡಿದ್ದರು. ಈ ಬೆನ್ನಲ್ಲೇ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ರಾಜಧಾನಿಯ ಜನರನ್ನು ಬೆಚ್ಚಿಬೀಳಿಸಿದೆ.
ಹ್ಯಾಮ್ಟನ್ನಲ್ಲಿ ಗುಂಡಿನ ದಾಳಿ : ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಸಾಮಾನ್ಯ ಎಂಬಂತಾಗಿದೆ. ಇಲ್ಲಿನ ಹ್ಯಾಂಪ್ಟನ್‌ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ನಾಲ್ವರು ಪ್ರಾಣ ಕಳೆದುಕೊಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಅಟ್ಲಾಂಟಾದ ದಕ್ಷಿಣಕ್ಕಿರುವ ಸುಮಾರು 8,500 ಜನರು ವಾಸವಿರುವ ಹ್ಯಾಂಪ್ಟನ್‌ನ ಉಪವಿಭಾಗದಲ್ಲಿ ಶೂಟೌಟ್ ನಡೆದಿತ್ತು.
ಇದನ್ನೂ ಓದಿ : ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ಮನೆಯಲ್ಲಿ 4 ಶವ ಪತ್ತೆ, ಮೂವರಿಗೆ ಗಾಯ