ಚಿಕಾಗೋ: ಅಮೆರಿಕದ 246ನೇ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಕಪ್ಪುಚುಕ್ಕೆಯಂತೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, 24ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಹಂತಕ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜುಲೈ 4 ರಂದು ಅಮೆರಿಕ ಸ್ವಾತಂತ್ರ್ಯ ಘೋಷಿಸಿಕೊಂಡ 246ನೇ ವರ್ಷಾಚರಣೆಯ ಸಂಭ್ರಮದ ಮೆರವಣಿಗೆ ನಡೆಯುತ್ತಿತ್ತು. ಚಿಕಾಗೋದ ಹೈಲ್ಯಾಂಡ್ ಪಾರ್ಕ್ನಲ್ಲಿ ಹೋಗುತ್ತಿದ್ದ ಮೆರವಣಿಗೆಯ ಮೇಲೆ ಕಟ್ಟಡದ ಮೇಲ್ಛಾವಣಿಯ ಮೇಲೆ ಮರೆಯಾಗಿ ನಿಂತಿದ್ದ ಅನಾಮಿಕನೊಬ್ಬ ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದಾನೆ.

ಘಟನೆಯಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 24 ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಆ ಪ್ರದೇಶವನ್ನು ಶೋಧಿಸಿದಾಗ ಹಂತಕ ಕಟ್ಟಡದ ಮೇಲೆ ಬಿಟ್ಟು ಹೋದ ಬಂದೂಕು ಸಿಕ್ಕಿದ್ದು, ವಶಕ್ಕೆ ಪಡೆಯಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. "ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಮೇಲೆ ಆಗಂತುಕನ ಈ ದಾಳಿ ಹಲವರ ಪ್ರಾಣ ಬಲಿ ಪಡೆದಿದೆ. ದಾಳಿ ನಡೆಸಿದ ವ್ಯಕ್ತಿ ಬಬ್ಬನೇ ಇದ್ದ ಎಂದು ಹೇಳಲಾಗಿದೆ. ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಬಂದೂಕು ನಿಷೇಧಕ್ಕೆ ಸಮ್ಮತಿ: ನಾಗರಿಕರು ಅವ್ಯಾಹತವಾಗಿ ಬಳಸುತ್ತಿರುವ ಬಂದೂಕುಗಳಿಗೆ ಕಡಿವಾಣ ಹಾಕಲು ಅಮೆರಿಕ ಸರ್ಕಾರ ಮುಂದಾಗಿದ್ದು, ಇತ್ತೀಚೆಗಷ್ಟೇ ಬೈಡೆನ್ ಬಂದೂಕು ಪ್ರತಿಬಂಧಕ ಕಾಯ್ದೆಗೆ ಸಹಿ ಹಾಕಿದ್ದರು. ಆದಾಗ್ಯೂ ನಿನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಂದೂಕು ಸದ್ದು ಮಾಡಿದೆ.
ಇದನ್ನೂ ಓದಿ: ವಿಜಯನಗರ ಬಾಲಕನ ಅಪಹರಣ ಪ್ರಕರಣ: ಪೊಲೀಸರ ಕಾರ್ಯಾಚರಣೆಯಿಂದ ಸುಖಾಂತ್ಯ