ಸಾಲ್ಟ್ ಲೇಕ್ ಸಿಟಿ(ಅಮೆರಿಕ): ಅಮೆರಿಕದಲ್ಲೊಂದು ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಸ್ಟೋರಿ ಬೆಳಕಿಗೆ ಬಂದಿದೆ. ಹೌದು ಒಂದು ವರ್ಷ ಹಿಂದೆ ಸಾವನ್ನಪ್ಪಿದ್ದ ತನ್ನ ಪತಿಯ ಅಗಲಿಕೆಯ ನೋವಿನಿಂದ ಆತನ ಪತ್ನಿ ಪುಸ್ತಕವನ್ನು ಬರೆದಿದ್ದಳು. ಆದರೆ ಈಗ ಆಕೆಯೇ ಆತನ ಸಾವಿಗೆ ಕಾರಣವೆಂದು ಗೊತ್ತಾಗಿದ್ದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಈಕೆ ಒಂದು ವರ್ಷದ ನಂತರ ಸಿಕ್ಕಿ ಬಿದ್ದಿದ್ದಾದರು ಹೇಗೆ ಎಂದು ಗೊತ್ತಾದರೆ ನೀವು ಅಚ್ಚರಿ ಪಡುವುದು ಖಂಡಿತ.
ಅಮೆರಿಕದ ಕೌರಿ ರಿಚಿನ್ಸ್(33) ಎಂಬ ಮಹಿಳೆ ತನ್ನ ಪತಿಯ ಅಗಲಿಕೆಯ ನಂತರ ತನ್ನ ಮಕ್ಕಳಿಗಾಗಿ ಅವರ ನೆನಪಿಗಾಗಿ ‘ಆರ್ ಯು ವಿತ್ ಮಿ’ ಎಂಬ ಪುಸ್ತಕವನ್ನು ಬರೆದಿದ್ದರು. ತಂದೆಯ ಮರಣದ ನಂತರ ತನ್ನ ಜೀವನದಲ್ಲಿ ತನ್ನ ತಂದೆಯ ಉಪಸ್ಥಿತಿಯ ಬಗ್ಗೆ ಆಶ್ಚರ್ಯಪಡುವ ಚಿಕ್ಕ ಹುಡುಗನ ಬಗ್ಗೆ ಸಚಿತ್ರ ಕಥೆ ಪುಸ್ತಕವಿದು. ಪತಿಯ ಮರಣದ ನಂತರ ತಾನು ಎದುರಿಸಿದ ನೋವು ಮತ್ತು ಸನ್ನಿವೇಶಗಳ ಕುರಿತು ಈ ಪುಸ್ತಕವನ್ನು ಬರೆದಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದರು.
ತಂದೆಯನ್ನು ಕಳೆದುಕೊಂಡ ಇತರ ಮಕ್ಕಳು ಕೂಡ ಆ ನೋವಿನಿಂದ ಹೊರಬರಬೇಕು, ಭಾವನೆಗಳನ್ನು ಮೆಟ್ಟಿನಿಂತು ಮತ್ತೆ ನೆಮ್ಮದಿ ಕಾಣಲು ಈ ಪುಸ್ತಕ ಸಹಕಾರಿಯಾಗಲಿದೆ ಎಂದಿದ್ದರು. ಇವರು ಮತ್ತು ಪುಸ್ತಕ ಎಲ್ಲರ ಗಮನವನ್ನೂ ಸೆಳೆದಿತ್ತು. ಸ್ವಯಂ - ಪ್ರಕಟಿಸಿದ ಈ ಪುಸ್ತಕ ಎಲ್ಲೆಡೆ ಸದ್ದು ಮಾಡಿತ್ತು. ಇದೇ ಪುಸ್ತಕ ಈಗ ಕೊಲೆಗಾರರನ್ನು ಸಹ ಕಂಡು ಹಿಡಿಯಲು ನೆರವಾಗಿದೆ. ಅಷ್ಟೇ ಅಲ್ಲ, ಪುಸ್ತಕರ ಬರೆದಾಕೆಯೇ ಕೊಲೆಗಾರ್ತಿ ಎಂಬ ಅಂಶವನ್ನು ಅವರೇ ಬರೆದ ಪುಸ್ತಕ ಪತ್ತೆ ಹಚ್ಚಿದ್ದು ಇಲ್ಲಿ ಅಚ್ಚರಿಗೆ ಕಾರಣವಾಗಿದೆ.
ಪುಸ್ತಕ ನೀಡಿದ ಸುಳಿವಿನ ಮೇಲೆ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ಬರಹಗಾರ್ತಿಯೇ ತನ್ನ ಪತಿಯನ್ನು ಕೊಲೆ ಮಾಡಿದ್ದಾರೆ ಎಂಬುದನ್ನು ತನಿಖೆ ನಡೆಸಿ ಬಹಿರಂಗ ಮಾಡಿದ್ದಾರೆ.
ಕೊಲೆ ಹಿಂದಿನ ಕಥೆ: ಕೌರಿ ಡಾರ್ಡನ್ ರಿಚಿನ್ಸ್ (33) ಎಂಬಾಕೆ ಕಳೆದ ವರ್ಷ ಮಾರ್ಚ್ 4 2022 ರಂದು ತನ್ನ ಪತಿ ಎರಿಕ್ ರಿಚಿನ್ಸ್‌ಗೆ ಮದ್ಯದಲ್ಲಿ ಔಷಧ ಬೆರೆಸಿ ನೀಡಿದ್ದರು. ಅದನ್ನು ಕುಡಿದ ನಂತರ ಅವನು ಅಸ್ವಸ್ಥನಾಗುತ್ತಾನೆ, ಇದನ್ನು ಗಮನಿಸಿದ ಮಹಿಳೆ 911ಗೆ ಕರೆ ಮಾಡಿ ತನ್ನ ಪತಿಯ ದೇಹ ತಣ್ಣಗಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ. ಇದರಿಂದ ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಆಕೆಯ ಪತಿ ಅಂದರೆ ಎರಿಕ್ ರಿಚಿನ್ಸ್ ಹಾಸಿಗೆಯ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿ ಅವನನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆ ಸಂದರ್ಭದಲ್ಲಿ ಆಕೆ ತಾನು ಪತಿಗೆ ಮದ್ಯ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ, ಶವಪರೀಕ್ಷೆಯಲ್ಲಿ ಅವರ ದೇಹದಲ್ಲಿ ಮಿತಿಮೀರಿದ ಔಷಧದ ಸೇವನೆಯಿತ್ತು ಮತ್ತು ಇದರಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆಯು ಡಿಸೆಂಬರ್ 2021 ಮತ್ತು ಫೆಬ್ರವರಿ 2022 ರ ನಡುವೆ ಮಾದಕವಸ್ತು ಆರೋಪದ ಮೇಲೆ ಬಂಧಿಸಲ್ಪಟ್ಟ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಅವರ ಮೊಬೈಲ್ ಕರೆ ಡೇಟಾದ ಮೂಲಕ ತಿಳಿದುಬಂದಿದೆ. ತನ್ನ ಪತಿ ಬೆನ್ನುಮೂಳೆಯ ಗಾಯದಿಂದ ಬಳಲುತ್ತಿರುವುದಾಗಿ ಆತನಿಂದ ಹಲವು ಬಾರಿ ಮಾತ್ರೆಗಳನ್ನು ಖರೀದಿಸಿದ್ದರು.
ಎರಿಕ್ ರಿಚಿನ್ಸ್ ಈ ಮಾತ್ರೆಗಳನ್ನು ಖರೀದಿಸಿದ ಮೂರು ದಿನಗಳ ನಂತರ ಫೆಬ್ರವರಿ 14, 2022 ರಂದು ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಇದರಿಂದ ಅನುಮಾನಗೊಂಡ ಎರಿಕ್ ರಿಚಿನ್ಸ್ ತನ್ನ ಪತ್ನಿ ವಿಷ ಕೊಡಲು ಯತ್ನಿಸುತ್ತಿರುವ ಶಂಕೆ ವ್ಯಕ್ತಪಡಿಸಿ ಸ್ನೇಹಿತರಿಗೆ ತಿಳಿಸಿದ್ದಾನೆ. ನೋವು ಕಡಿಮೆಯಾಗದ ಕಾರಣ, ಆಕೆ ಮತ್ತೆ ಆ ವ್ಯಕ್ತಿಯೊಂದಿಗೆ ಬಲವಾದ ಮಾತ್ರೆಗಳನ್ನು ಕೇಳಿದ್ದಾಳೆ. ಪತಿ ಸಾಯುವ ಎರಡು ವಾರಗಳ ಮೊದಲು ಅವರು ಮಾತ್ರೆಗಳನ್ನು ಖರೀದಿಸಿದ್ದಾಳೆ. ಆಕೆ ಖರೀದಿಸಿದ ಔಷಧ ಎರಿಕ್ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿತ್ತು ಎಂಬುದು ಮುಖ್ಯವಾಗಿ ಕಂಡು ಬಂದಿದೆ. ಈ ಔಷಧವೇ ಪತಿಯ ಸಾವಿಗೆ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದ್ದರಿಂದ ಸಿ ಕೌರಿ ರಿಚಿನ್ಸ್ನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕೇರಳ ವೈದ್ಯೆ ಕೊಂದ ಕುಡುಕ ಹಂತಕನಿಗೆ 14 ದಿನ ನ್ಯಾಯಾಂಗ ಬಂಧನ, ಕೊಲೆ ಕಾರಣ ನಿಗೂಢ