ಹರಾರೆ : ಜಿಂಬಾಬ್ವೆಯ ಅತಿದೊಡ್ಡ ಸಂರಕ್ಷಿತ ಅರಣ್ಯ ಪ್ರದೇಶವಾದ ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಎಲ್ ನಿನೊ ಪ್ರೇರಿತ ಬರದಿಂದ ಕನಿಷ್ಠ 100 ಆನೆಗಳು ಸಾವನ್ನಪ್ಪಿವೆ ಎಂದು ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣಾ ಸಂಘಟನೆ ತಿಳಿಸಿದೆ. ಸುಮಾರು 45,000 ಆನೆಗಳಿಗೆ ನೆಲೆಯಾಗಿರುವ ಜಿಂಬಾಬ್ವೆಯ ಅತಿದೊಡ್ಡ ಸಂರಕ್ಷಿತ ಅರಣ್ಯವಾದ ಹ್ವಾಂಗೆ ರಾಷ್ಟ್ರೀಯ ಉದ್ಯಾನದಲ್ಲಿ ಈಗಾಗಲೇ ಡಜನ್ಗಟ್ಟಲೆ ಆನೆಗಳು ಸಾವನ್ನಪ್ಪಿವೆ. ಎಲ್ ನಿನೊ ವಿದ್ಯಮಾನದಿಂದಾಗಿ ಬೇಸಿಗೆ ಮಳೆ ಐದು ವಾರ ತಡವಾಗಿರುವುದು ಆನೆಗಳ ಸಾವಿಗೆ ಕಾರಣವಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ನಿಧಿ (ಐಎಫ್ಎಡಬ್ಲ್ಯೂ) ಹೇಳಿಕೆಯಲ್ಲಿ ತಿಳಿಸಿದೆ.
ನೀರಿನ ಕೊರತೆಯಿಂದಾಗಿ ಕನಿಷ್ಠ 100 ಆನೆಗಳು ಈಗಾಗಲೇ ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಉದ್ಯಾನದಲ್ಲಿರುವ 104 ಸೌರಶಕ್ತಿ ಚಾಲಿತ ಕೊಳವೆಬಾವಿಗಳು ಪ್ರಾಣಿಗಳಿಗೆ ಅಗತ್ಯ ಇರುವಷ್ಟು ನೀರು ಪೂರೈಸಲು ಸಾಕಾಗುತ್ತಿಲ್ಲ. ಹೀಗಾಗಿ ಪ್ರಾಣಿಗಳು ನೀರು ಅರಸುತ್ತ ಬಹಳ ದೂರದವರೆಗೆ ನಡೆಯುತ್ತ ಸಾಗುತ್ತಿವೆ ಎಂದು ಸಂಸ್ಥೆ ಹೇಳಿದೆ.
ಹ್ವಾಂಗೆಯಲ್ಲಿ 45,000 ಆನೆಗಳಿವೆ ಮತ್ತು ಸಂಪೂರ್ಣವಾಗಿ ಬೆಳೆದ ಆನೆಗೆ ನಿತ್ಯ 200 ಲೀಟರ್ (53 ಗ್ಯಾಲನ್) ನೀರು ಬೇಕಾಗುತ್ತದೆ. ಆದರೆ, ನೀರಿನ ಮೂಲಗಳು ಕ್ಷೀಣಿಸುತ್ತಿರುವುದರಿಂದ ಕೊಳವೆಬಾವಿಗಳು ಅಥವಾ ಬಾವಿಗಳಲ್ಲಿನ ಸೌರಶಕ್ತಿ ಚಾಲಿತ ಪಂಪ್ ಗಳಿಗೆ ಸಾಕಷ್ಟು ನೀರನ್ನು ಮೇಲಕ್ಕೆತ್ತಲು ಸಾಧ್ಯವಾಗುತ್ತಿಲ್ಲ.
ಹ್ವಾಂಗೆಯಲ್ಲಿ ಯಾವುದೇ ಪ್ರಮುಖ ನದಿ ಇಲ್ಲ ಮತ್ತು ಪ್ರಾಣಿಗಳು ಸೌರಶಕ್ತಿ ಚಾಲಿತ ಕೊಳವೆಬಾವಿಗಳನ್ನು ಅವಲಂಬಿಸಿವೆ ಎಂದು ಜಿಂಬಾಬ್ವೆ ಉದ್ಯಾನಗಳು ಮತ್ತು ವನ್ಯಜೀವಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಬರದಿಂದ ಆನೆಗಳಂಥ ನೀರು ಅವಲಂಬಿತ ಸಸ್ತನಿಗಳು ಹೆಚ್ಚು ಬಾಧಿತವಾಗಿವೆ ಮತ್ತು ಶೀಘ್ರದಲ್ಲೇ ಮಳೆ ಬರದಿದ್ದರೆ ಆನೆ ಸೇರಿದಂತೆ ಇತರ ವನ್ಯಜೀವಿಗಳ ಜೀವಕ್ಕೆ ಆಪತ್ತು ಬರಲಿದೆ ಎಂದು ಐಎಫ್ಎಡಬ್ಲ್ಯೂ ಹೇಳಿದೆ.
2019ರಲ್ಲಿ ಜಿಂಬಾಬ್ವೆಯಲ್ಲಿ 200 ಕ್ಕೂ ಹೆಚ್ಚು ಆನೆಗಳು ತೀವ್ರ ಬರಗಾಲದಿಂದ ಸಾವನ್ನಪ್ಪಿದ್ದವು ಮತ್ತು ಐಎಫ್ಎಡಬ್ಲ್ಯೂ ಪ್ರಕಾರ ಈ ವಿದ್ಯಮಾನವು ಪುನರಾವರ್ತನೆಯಾಗುತ್ತಿದೆ. ಜಿಂಬಾಬ್ವೆಯಲ್ಲಿ ಆನೆಗಳ ಸಾವುಗಳು ಹವಾಮಾನ ಬದಲಾವಣೆಯಿಂದ ಉಲ್ಬಣಗೊಂಡ ಸಂಕೀರ್ಣ ಸವಾಲುಗಳ ಲಕ್ಷಣವಾಗಿದೆ ಎಂದು ಐಎಫ್ಎಡಬ್ಲ್ಯೂ ಹೇಳಿದೆ. ಜಿಂಬಾಬ್ವೆಯಲ್ಲಿ ನವೆಂಬರ್ ನಿಂದ ಮಾರ್ಚ್ ವರೆಗೆ ಮಳೆಗಾಲವಿರುತ್ತದೆ. ಆದರೆ ಈ ವರ್ಷ ಇಲ್ಲಿಯವರೆಗೆ ಮಳೆಯಾಗಿಲ್ಲ. ಜಿಂಬಾಬ್ವೆ ಹವಾಮಾನ ಇಲಾಖೆಯ ಪ್ರಕಾರ 2024 ರವರೆಗೆ ಬರಗಾಲ ಮುಂದುವರಿಯುವ ನಿರೀಕ್ಷೆಯಿದೆ.
ಇದನ್ನೂ ಓದಿ : ಗುಪ್ತಚರ ಸಂಸ್ಥೆ ಶಿನ್ಬೆಟ್ನಿಂದ ಬಂಧಿತ 140 ಹಮಾಸ್ ಉಗ್ರರ ತೀವ್ರ ವಿಚಾರಣೆ