ಬೀಜಿಂಗ್/ಹಾರ್ಬಿನ್ (ಚೀನಾ): ಶಾಲೆಯ ಮೇಲಿನ ಮಹಡಿಯ ಜಿಮ್ನ ಮೇಲ್ಛಾವಣಿ ಕುಸಿದುಬಿದ್ದು 9 ಮಂದಿ ಸಾವನ್ನಪ್ಪಿ, ಹಲವು ಜನರು ಗಾಯಗೊಂಡಿರುವ ಘಟನೆ ಈಶಾನ್ಯ ಚೀನಾದಲ್ಲಿ ನಡೆದಿದೆ. ಇಲ್ಲಿನ ಹೈಲಾಂಗ್ ಜಿಯಾಂಗ್ ಪ್ರಾಂತ್ಯದ ಲಾಂಗ್ ಶಾ ಜಿಲ್ಲೆಯ ಕಿಕಿಹಾರ್ ನಗರದಲ್ಲಿ ದುರ್ಘಟನೆ ಸಂಭವಿಸಿದೆ.
ಈ ಶಾಲೆಯ ಜಿಮ್ನಲ್ಲಿ ಸುಮಾರು 19 ಮಂದಿ ಇದ್ದರು. ಈ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿದುಬಿದ್ದಿದ್ದು, ಸುಮಾರು 15 ಮಂದಿ ಇದರಲ್ಲಿ ಸಿಲುಕಿದ್ದರು. ನಾಲ್ವರು ಅಪಾಯದಿಂದ ಪಾರಾಗಿದ್ದು, ಗಾಯಾಳುಗಳನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ 9 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೇಲ್ಛಾವಣಿ ಅಡಿಯಲ್ಲಿ ಇಬ್ಬರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಜಿಮ್ನ ಕಟ್ಟಡಕ್ಕೆ ಹೊಂದಿಕೊಂಡಂತೆ ಮತ್ತೊಂದು ಕಟ್ಟಡವನ್ನು ನಿರ್ಮಿಸುವಾಗ ಕಟ್ಟಡ ಕಾರ್ಮಿಕರು ಛಾವಣಿಯ ಮೇಲೆ ಪರ್ಲೈಟ್ನ್ನು ಇರಿಸಿ ಹೋಗಿದ್ದರು. ಮಳೆಯಿಂದಾಗಿ ಪರ್ಲೈಟ್ ನೀರಿನಲ್ಲಿ ನೆನೆದಿದ್ದರಿಂದ ತೂಕ ಹೆಚ್ಚಾಗಿ ಛಾವಣಿಯ ಕುಸಿತಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕಟ್ಟಡ ಕಾಮಗಾರಿಯನ್ನು ನೋಡುತ್ತಿದ್ದ ಉಸ್ತುವಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಪ್ರಿಯಕರನ ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ ರಾಜಸ್ಥಾನದ ವಿವಾಹಿತ ಮಹಿಳೆ