ಎಡಿನ್‌ಬರ್ಗ್ (ಸ್ಕಾಟ್ಲೆಂಡ್): ಕಾನೂನು ಬದ್ಧವಾಗಿಯೇ ಲಿಂಗ ಬದಲಾವಣೆಗೆ ಅನುಮತಿಸುವ ವಿಧೇಯಕಕ್ಕೆ ಸ್ಕಾಟ್ಲೆಂಡ್ ಸಂಸತ್ ಅನುಮೋದನೆ ನೀಡಿದೆ. ಈ ಸಂಬಂದ ಸದನದಲ್ಲಿ ಪರ ವಿರೋಧದ ಚರ್ಚೆ ನಡೆಯಿತು. ಆಡಳಿತಾರೂಢ ಸ್ಕಾಟಿಷ್ ನ್ಯಾಶನಲ್ ಪಾರ್ಟಿಯಲ್ಲೇ ಈ ಬಗ್ಗೆ ಭಿನ್ನಾಭಿಪ್ರಾಯ ಕೇಳಿ ಬಂದಿತ್ತು. ಹೈವೋಲ್ಟೇಜ್ ಚರ್ಚೆ - ವಾಗ್ವಾದದ ಮಧ್ಯೆಯೂ ಸ್ಕಾಟ್ಲೆಂಡ್‌ನ ಶಾಸಕರು ವಿವಾದಾತ್ಮಕ ಕಾನೂನನ್ನು ಅಂಗೀಕರಿಸಿದ್ದಾರೆ. ಈ ಮೂಲಕ ತೃತೀಯ ಲಿಂಗಿಗಳು ಕಾನೂನುಬದ್ದವಾಗಿ ಲಿಂಗ ಬದಲಾವಣೆಗೆ ಅನುಕೂಲವಾಗಲಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಈಗ ಮಸೂದೆ ಅಂಗೀಕಾರಗೊಂಡಿದ್ದು, ಇದು ಅಲ್ಲಿನ ರಾಜನ ಅನುಮತಿಯನ್ನು ಪಡೆಯಬೇಕಿದೆ. ರಾಜನ ಅನುಮತಿ ಬಳಿಕ ಹೊಸ ಕಾನೂನು ಜಾರಿಗೆ ಬರಲಿದೆ. ಇನ್ನು ಹೊಸ ಕಾನೂನಿನ ಪ್ರಕಾರ ಲಿಂಗ ಗುರುತಿಸುವಿಕೆ ಪ್ರಮಾಣಪತ್ರ ಬಯಸುವರಿಗೆ ಕನಿಷ್ಠ ವಯಸ್ಸನ್ನು 16ಕ್ಕೆ ಇಳಿಸಲು ಅನುಮತಿಸುತ್ತದೆ. ಅರ್ಜಿದಾರರು ಒಮ್ಮೆ ಲಿಂಗ ಬದಲಾವಣೆ ಮಾಡಿಕೊಂಡ ಬಳಿಕ ಎರಡು ವರ್ಷ ಮತ್ತೆ ಲಿಂಗ ಬದಲಾವಣೆಗೆ ಅವಕಾಶವಿಲ್ಲ. ಈ ಮೊದಲು ಇದ್ದ 3 ವರ್ಷಗಳ ಅವಧಿಯಲ್ಲಿ ಹೊಸ ವಿಧೇಯಕದಲ್ಲಿ ಎರಡು ವರ್ಷಗಳಿಗೆ ಇಳಿಕೆ ಮಾಡಲಾಗಿದೆ.
ಇನ್ನು ವಿಶೇಷ ಎಂದರೆ ಲಿಂಗ ಬದಲಾವಣೆ ಮಾಡಿಸಿಕೊಂಡ ಬಗ್ಗೆ ಪ್ರಮಾಣಪತ್ರ ಪಡೆಯಲು ಈ ಮೊದಲು ಇದ್ದ ಷರತ್ತುಗಳನ್ನು ಹಾಗೂ ವೈದ್ಯಕೀಯ ಪರೀಕ್ಷೆಯ ಅಗತ್ಯತೆಯನ್ನೂ ಈಗ ತೆಗೆದು ಹಾಕಲಾಗಿದೆ. ಸ್ಕಾಟ್ಲೆಂಡ್‌ನ ಸಂಸತ್ನಲ್ಲಿ ಗುರುವಾರ ಅಂಗೀಕಾರಗೊಂಡ ಮಸೂದೆ ಪರವಾಗಿ 86 ಮತಗಳು ಬಿದ್ದರೆ, ವಿರೋಧವಾಗಿ 39 ಮತಗಳು ಬಂದಿವೆ. ವಿಶೇಷ ಎಂದರೆ ಈ ವಿಧೇಯಕದ ಮೇಲೆ ಒಂದು ವಾರಗಳ ಕಾಲ ಚರ್ಚೆ ನಡೆಸಲಾಯಿತು.
ಹೊಸ ಕಾನೂನು ಅಂಗೀಕಾರದ ವೇಳೆ ಸ್ಕಾಟಿಷ್ ಸಂಸತ್ತಿನ ಇತಿಹಾಸದಲ್ಲಿ ಅತಿದೊಡ್ಡ ಸಂವಾದ- ವಾದ- ಪ್ರತಿವಾದ - ವಾಗ್ವಾದಕ್ಕೆ ಕಾರಣವಾಯಿತು, ಆಡಳಿತಾರೂಢ ಸರ್ಕಾರದ 9 ಮಂದಿ ವಿಧೇಯಕದ ವಿರುದ್ಧ ಮತ ಚಲಾಯಿಸಿ ಆಡಳಿತ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದರು. ಅಷ್ಟೇ ಅಲ್ಲ ಸ್ಕಾಟಿಷ್ ಲೇಬರ್ ಪಕ್ಷದ ಸಂಸದರು ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದಲ್ಲದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಇದನ್ನು ಓದಿ: ಉಕ್ರೇನ್ ಜೊತೆಗಿನ ಯುದ್ಧ ಕೊನೆಗೊಳಿಸಲು ಬಯಸುತ್ತೇವೆ: ರಷ್ಯಾ ಅಧ್ಯಕ್ಷ ಪುಟಿನ್ ಸುಳಿವು