ಜೆಡ್ಡಾ: ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ದೈನಂದಿನ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ. ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಭಾರತ, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್ ಹಾಗು ವೆನೆಜುವೆಲಾ ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.
ದೇಶದಲ್ಲಿ ಮತ್ತೆ ಕೊರೊನಾ ಸೋಂಕಿನ ಹಾವಳಿ ಹೆಚ್ಚಾದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸೌದಿ ಅರೇಬಿಯಾದಲ್ಲಿ ಇದುವರೆಗೂ ಯಾವುದೇ 'ಮಂಕಿಪಾಕ್ಸ್' ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದರೆ ಸೂಕ್ತ ಪರೀಕ್ಷೆ ನಡೆಸಲಾಗುವುದು. ಸೋಂಕು ಪತ್ತೆಹಚ್ಚಲು ಹಾಗು ಹೊಸ ಪ್ರಕರಣಗಳ ವಿರುದ್ಧ ಹೋರಾಡಲು ಸಿದ್ಧವಾಗಿದೆ, ಸೋಂಕು ತಡೆಗಟ್ಟುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಆರೋಗ್ಯ ಸಚಿವ ಅಬ್ದುಲ್ಲಾ ಅಸಿರಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿದ ಮಾಹಿತಿ ಪ್ರಕಾರ, 11 ದೇಶಗಳಲ್ಲಿ 80 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ. ಶಂಕಿತ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮತ್ತಷ್ಟು ಹೊಸ ಸೋಂಕಿತ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಯುರೋಪ್, ಅಮೆರಿಕ ದೇಶಗಳಲ್ಲಿ ಗಣನೀಯವಾಗಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿವೆ.