ರಿಯಾದ್(ಸೌದಿ ಅರೇಬಿಯಾ): ಸಂಘರ್ಷ ಪೀಡಿತ ಸುಡಾನ್‌ನಿಂದ ಸೌದಿ ಅರೇಬಿಯಾಕ್ಕೆ ಕೆಲ ಭಾರತೀಯರು ಸೇರಿದಂತೆ 12 ರಾಷ್ಟ್ರಗಳ 66 ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಭಯಗ್ರಸ್ಥ ಸ್ಥಳದಿಂದ ತಕ್ಷಣವೇ ಭಾರತೀಯರ ಸ್ಥಳಾಂತರಕ್ಕೆ ನೆರವು ನೀಡಲು ಭಾರತ ಕೋರಿದ ಬೆನ್ನಲ್ಲೇ ಸೌದಿ ಈ ಕಾರ್ಯ ಕೈಗೊಂಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸೌದಿ ಸರ್ಕಾರ, 91 ಸೌದಿ ಅರೇಬಿಯಾದ ನಾಗರಿಕರ ಜೊತೆಗೆ ವಿವಿಧ ರಾಷ್ಟ್ರಗಳ 66 ಜನರನ್ನು ಸ್ಥಳಾಂತರಿಸಲಾಗಿದೆ ಎಂದಿದೆ.
ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸುಡಾನ್ನಲ್ಲಿ ಕಾಳಗ ನಡೆಯುತ್ತಿದ್ದು, 72 ಗಂಟೆಗಳ ಕದನ ವಿರಾಮದ ಘೋಷಿಸಲಾಗಿದೆ. ಇದನ್ನೇ ಬಳಸಿಕೊಂಡ ಸೌದಿ ಅರೇಬಿಯಾ ನಾಗರಿಕರ ರಕ್ಷಣೆಗೆ ಧಾವಿಸಿದೆ. ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟ್ಯುನೀಶಿಯಾ, ಪಾಕಿಸ್ತಾನ, ಭಾರತ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್ಸ್, ಕೆನಡಾ ಮತ್ತು ಬುರ್ಕಿನಾ ಫಾಸೊಕ್ಕೆ ಸೇರಿದ ಸುಮಾರು 66 ಪ್ರಜೆಗಳನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ಸೌದಿ ಅರೇಬಿಯಾ ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾ ವಿದೇಶಾಂಗ ಸಚಿವರ ಜೊತೆ ಮಾತನಾಡಿದ ಕೆಲವು ದಿನಗಳ ನಂತರ ಈ ಸ್ಥಳಾಂತರ ನಡೆದಿದೆ. ಸುಡಾನ್‌ನಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉನ್ನತ ಮಟ್ಟದ ಸಭೆಯ ನಡೆಸಿ, ಭಾರತೀಯರ ರಕ್ಷಣೆಗೆ ಸೂಚಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೌದಿ ಅರೇಬಿಯಾ ಅಧಿಕಾರಿಗಳ ಜೊತೆ ಚರ್ಚಿಸಿದ್ದರು. ಸುಡಾನ್‌ನಲ್ಲಿನ ಪ್ರಸ್ತುತ ಬೆಳವಣಿಗೆ ಮತ್ತು ಆ ದೇಶದಲ್ಲಿ ನೆಲೆಸಿರುವ 3,000 ಕ್ಕೂ ಹೆಚ್ಚು ಭಾರತೀಯ ನಾಗರಿಕರ ಸುರಕ್ಷತೆಯ ಮೇಲೆ ನಿಗಾ ವಹಿಸುವ ಕುರಿತಾಗಿ ಮಾಹಿತಿ ಪಡೆದಿದ್ದರು.
ಓರ್ವ ಭಾರತೀಯ ಸಾವು: ಸುಡಾನ್ ಸಂಘರ್ಷದಲ್ಲಿ ಕಳೆದ ವಾರ ಓರ್ವ ಭಾರತೀಯ ಮೃತಪಟ್ಟಿದ್ದ. ಭಾರತೀಯನ ನಿಧನಕ್ಕೆ ಪ್ರಧಾನಿ ಸಂತಾಪ ಸೂಚಿಸಿದ್ದರು. ಅಲ್ಲದೇ, ಸುಡಾನ್ ದೇಶದಲ್ಲಿ ಸಿಲುಕಿರುವ ದೇಶದ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕ್ಷಿಪ್ರವಾಗಿ ಅವರನ್ನು ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಾಗುವ ಎಲ್ಲ ಮಾರ್ಗಗಳನ್ನು ರೂಪಿಸಲು ನಿರ್ದೇಶನ ನೀಡಿದ್ದರು.
ಸುಡಾನ್ನಲ್ಲಿ ಏನಾಗ್ತಿದೆ: ಸುಡಾನ್‌ನ ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್ ಬುರ್ಹಾನ್ ಮತ್ತು ಅರೆಸೈನಿಕ ಕ್ಷಿಪ್ರ ಪಡೆಗಳ ಕಮಾಂಡರ್ ಆಗಿರುವ ಮೊಹಮದ್ ಹಮ್ದಾನ್ ಡಾಗ್ಲೋ ಮಧ್ಯೆ ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಿದೆ. ಎರಡು ಪಡೆಗಳ ಮಧ್ಯೆ ಗುಂಡಿನ ಕಾಳಗ ಶುರುವಾಗಿದೆ. ಇದು 2021 ರಿಂದ ಶುರುವಾಗಿದ್ದು, ಈಗ ತಾರಕಕ್ಕೇರಿದೆ. ಸರ್ವಾಧಿಕಾರಿ ಆಡಳಿತಕ್ಕೆ ಒಳಪಟ್ಟಿದ್ದ ಸುಡಾನ್ 2019 ರಲ್ಲಿ ಸರ್ವಾಧಿಕಾರಿ ಒಮರ್ ಅಲ್ ಬಶೀರ್ ನಿಧನದ ನಂತರ ದೇಶ ಪ್ರಜಾಪ್ರಭುತ್ವದತ್ತ ಹೊರಳಿತ್ತು. ಇದೀಗ ಅಧಿಕಾರ ಸ್ಥಾಪನೆಗಾಗಿ ಸೇನಾ ಪಡೆಗಳ ಇಬ್ಬರು ಮುಖ್ಯಸ್ಥರು ನಡೆಸುತ್ತಿರುವ ಕಾಳಗ ಪ್ರಜಾಪ್ರಭುತ್ವ ಸರ್ಕಾರ ರಚನೆಯ ಹಳಿ ತಪ್ಪಿಸಿದೆ.
ಓದಿ: ಸುಡಾನ್ನಲ್ಲಿ ಸಿಲುಕಿದ ಕನ್ನಡಿಗರು: ಸಿದ್ದರಾಮಯ್ಯ- ಜೈಶಂಕರ್ ಮಧ್ಯೆ ಟ್ವೀಟ್ ವಾರ್