ನವದೆಹಲಿ: ಒಪ್ಪಂದದಂತೆ ಭಾರತಕ್ಕೆ ಎಸ್-400 ಟ್ರಯಂಫ್ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಪೂರೈಸುವುದಾಗಿ ರಷ್ಯಾ ಹೇಳಿದೆ. ಉಕ್ರೇನ್ ವಿರುದ್ಧದ ಯುದ್ಧವು ಪೂರೈಕೆಯನ್ನು ವಿಳಂಬಗೊಳಿಸಬಹುದು ಎಂದು ಭಾರತ ಕಳವಳ ವ್ಯಕ್ತಪಡಿಸಿರುವುದಕ್ಕೆ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಸ್ಪಷ್ಟನೆ ನೀಡಿದರು.
ಐದು ಘಟಕಗಳ ಎಸ್-400 ವ್ಯವಸ್ಥೆಗಾಗಿ ಅಕ್ಟೋಬರ್ 2018ರಲ್ಲಿ ಭಾರತ ರಷ್ಯಾದೊಂದಿಗೆ $500 ಬಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಅವುಗಳಲ್ಲಿ ಮೊದಲ ಘಟಕವನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಎರಡನೇ ರೆಜಿಮೆಂಟ್ ಅನ್ನು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಪೂರೈಸಲಾಗಿದೆ.
ಇದನ್ನೂ ಓದಿ: ಮಾಸ್ಕೋ ಆಕ್ರಮಿತ ದಕ್ಷಿಣ ಉಕ್ರೇನ್ ನಗರಗಳಲ್ಲಿ 'ರಷ್ಯಾ ದಿನ' ಆಚರಣೆ
"ಉಭಯ ದೇಶಗಳ ನಡುವಿನ ಬಹುಆಯಾಮದ ಸಹಕಾರವು ಅತ್ಯಂತ ವಿಸ್ತಾರವಾಗಿದೆ. ನಿಜವಾದ ಸ್ನೇಹ ಮತ್ತು ಪರಸ್ಪರ ನಂಬಿಕೆ ನಿರ್ಮಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸಂಪರ್ಕ, ವಜ್ರ ಸಂಸ್ಕರಣೆ, ಅರಣ್ಯ, ಆರೋಗ್ಯ ಮತ್ತು ಔಷಧ ವಲಯ, ಪ್ರವಾಸೋದ್ಯಮ, ರೈಲ್ವೆ, ಲೋಹಶಾಸ್ತ್ರ, ನಾಗರಿಕ ವಿಮಾನಯಾನ, ಹಡಗು ನಿರ್ಮಾಣ, ತೈಲ ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ಸ್‌ನಲ್ಲಿ ರಷ್ಯಾದ ಮಾರುಕಟ್ಟೆಗಳಲ್ಲಿ ಭಾರತೀಯ ವ್ಯಾಪಾರಕ್ಕೆ ಸಾಕಷ್ಟು ಅವಕಾಶಗಳಿವೆ. ಭಾರತದೊಂದಿಗೆ ರಷ್ಯಾ ಸಮಾನ ಮತ್ತು ಗೌರವಾನ್ವಿತ ಸಂಬಂಧಗಳನ್ನು ಆಳವಾಗಿ ಹೊಂದಿದೆ" ಎಂದು ಅಲಿಪೋವ್ ವಿವರಿಸಿದರು.