ಕೀವ್ (ಉಕ್ರೇನ್): ಉಕ್ರೇನ್ನ ಬಂದರು ನಗರ ಒಡೆಸಾ ನಗರದ ಬಳಿ ಶುಕ್ರವಾರ ಬೆಳಗಿನ ಜಾವ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 18 ಜನ ಸಾವಿಗೀಡಾಗಿದ್ದಾರೆ. ಆಯಕಟ್ಟಿನ ಸ್ಥಳವಾದ ಬ್ಲ್ಯಾಕ್ ಸೀ ದ್ವೀಪದಿಂದ ರಕ್ಷಣಾ ಪಡೆಗಳು ಹಿಂದೆ ಸರಿದ ಒಂದೇ ದಿನದ ಅಂತರದಲ್ಲಿ ಈ ದಾಳಿ ನಡೆದಿದೆ.
ಬೆಳಗಾಗುವ ಮುನ್ನವೇ ನಡೆದ ದಾಳಿಯ ವಿಡಿಯೋದಲ್ಲಿ ಒಡೆಸಾದಿಂದ ನೈಋತ್ಯ ದಿಕ್ಕಿನಲ್ಲಿ 50 ಕಿಲೋಮೀಟರ್ ದೂರವಿರುವ ಪುಟ್ಟ ನಗರ ಸೆರ್ಹಿವ್ಕಾ ನಲ್ಲಿ ಸುಟ್ಟುಹೋದ, ಬಿದ್ದ ಕಟ್ಟಡಗಳ ಅವಶೇಷಗಳು ಕಂಡುಬರುತ್ತಿವೆ. ಬಹುಮಹಡಿಯ ದೊಡ್ಡ ಅಪಾರ್ಟಮೆಂಟ್ ಹಾಗೂ ರೆಸಾರ್ಟ್ ಒಂದರ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಉಕ್ರೇನ್ ಮಾಧ್ಯಮಗಳು ವರದಿ ಮಾಡಿವೆ.
"ಭಯೋತ್ಪಾದಕ ರಾಷ್ಟ್ರವೊಂದು ನಮ್ಮನ್ನು ಸಾಯಿಸಲು ಯತ್ನಿಸುತ್ತಿದೆ. ಯುದ್ಧಭೂಮಿಯಲ್ಲಿ ಸೋಲುತ್ತಿರುವ ಅವರು, ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿದ್ದಾರೆ." ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ಮುಖ್ಯ ಅಧಿಕಾರಿ ಆ್ಯಂಡ್ರಿ ಯೆರ್ಮಾಕ್ ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ 18 ಜನ ಸಾವಿಗೀಡಾಗಿದ್ದಾರೆ ಹಾಗೂ 30 ಜನ ಗಾಯಗೊಂಡಿದ್ದಾರೆ ಎಂದು ಒಡೆಸಾ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಟೆಲೆಗ್ರಾಂ ಮೆಸೇಜಿಂಗ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಗುರುವಾರ ಸ್ನೇಕ್ ಐಲ್ಯಾಂಡ್‌ನಿಂದ ರಷ್ಯಾ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ ವೈಮಾನಿಕ ದಾಳಿಗಳು ನಡೆದಿವೆ. ನಿರಂತರವಾಗಿ ಹಡಗುಗಳು ಸಂಚರಿಸುವ ಮಾರ್ಗದ ಉದ್ದಕ್ಕೂ ಸ್ನೇಕ್ ಐಲ್ಯಾಂಡ್ ದ್ವೀಪ ಹರಡಿಕೊಂಡಿದೆ. ಒಡೆಸಾದ ಮೇಲಿನ ಆಕ್ರಮಣಕ್ಕೆ ವೇದಿಕೆಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಷ್ಯಾವು ಯುದ್ಧದ ಆರಂಭಿಕ ದಿನಗಳಲ್ಲಿ ಈ ದ್ವೀಪದ ಮೇಲೆ ನಿಯಂತ್ರಣ ತೆಗೆದುಕೊಂಡಿತ್ತು.
ಸ್ನೇಕ್ ಐಲ್ಯಾಂಡ್‌ನಿಂದ ಸೈನ್ಯ ಹಿಂತೆಗೆದುಕೊಳ್ಳುವಿಕೆಯನ್ನು "ಸದ್ಭಾವನೆಯ ಸೂಚಕ" ಎಂದು ಕ್ರೆಮ್ಲಿನ್ ಹೇಳಿಕೊಂಡಿತ್ತು. ಆದರೆ ಉಕ್ರೇನ್ ಸೇನೆಯು ತನ್ನ ಬಲವಾದ ದಾಳಿಯ ಮೂಲಕ ರಷ್ಯಾ ಪಡೆಗಳು ದೋಣಿಗಳಲ್ಲಿ ಪಲಾಯನ ಮಾಡುವಂತೆ ಮಾಡಿದ್ದವು ಎಂದು ಹೇಳಲಾಗಿದೆ.